ಕಾರವಾರ: ವಿವಾದಾತ್ಮಕ ಸಾಗರ್ ಮಾಲ ಯೋಜನೆಗೆ ಸುಪ್ರೀಂ ಕೊರ್ಟ್ ತಡೆ
ಕಾರವಾರ: ವಿವಾದಾತ್ಮಕ ಸಾಗರ್ ಮಾಲ ಯೋಜನೆಗೆ ಸುಪ್ರೀಂ ಕೊರ್ಟ್ ತಡೆ ನೀಡಿರುವುದು ಆಲಿಗಡ್ಡ ಮೀನುಗಾರಿಕಾ ಬಂದರಿನಲ್ಲಿರುವ ಮೀನುಗಾರರಿಗೆ ಸಂತಸ ಮೂಡುವಂತೆ ಮಾಡಿದೆ.
ಸುಪ್ರೀಂ ಕೋರ್ಟ್ ಆದೇಶವನ್ನು ಈ ಪ್ರದೇಶದಲ್ಲಿರುವ ಮೀನುಗಾರರು ಸಂಭ್ರಮಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಹಕಾರ ಒಕ್ಕೂಟದ ಅಧ್ಯಕ್ಷ ರಾಜು ಈ ಬಗ್ಗೆ ಮಾತನಾಡಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಸಾಗರ್ ಮಾಲ ಯೋಜನೆ ವಿಷಯವಾಗಿ ತಮ್ಮ ಪರ ವಾದ ಮಂಡಿಸಿದ ವಕೀಲ ದೇವದತ್ತ ಕಾಮತ್ ಗೆ ಧನ್ಯವಾದ ತಿಳಿಸಿದ್ದಾರೆ.
ಕಾನೂನು ನೆರವು ನೀಡಿರುವ ಕಾಂಗ್ರೆಸ್ ನಾಯಕ ಸತೀಶ್ ಸೈಲ್ ಗೂ ರಾಜು ಧನ್ಯವಾದ ತಿಳಿಸಿದ್ದಾರೆ.
ಸಾಗರ ಮಾಲ ಯೋಜನೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮೌಖಿಕ ಆದೇಶ ನೀಡಿದೆ. ಇದು ಯೋಜನೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನೀಡಲಾಗಿರುವ 2 ನೇ ಸೂಚನೆಯಾಗಿದ್ದು ಎರಡೂ ಬಾರಿ ಸರ್ಕಾರವನ್ನು ಮೀನುಗಾರರು ಮಂಡಿಯೂರುವಂತೆ ಮಾಡಿದ್ದಾರೆ.
ಬೈಟ್ಕೋಲ್ ವಾಣಿಜ್ಯ ಬಂದರಿನ ವಿಸ್ತರಣೆಗೆ ಈ ಯೋಜನೆ ಪ್ರಸ್ತಾವನೆ ಹೊಂದಿದ್ದು, ಇದಕ್ಕಾಗಿ ಕನಿಷ್ಟ 200 ದೋಣಿಗಳು ನಿಲುಗಡೆಯಾಗುವ ಜಾಗವನ್ನು ವಶಕ್ಕೆ ಪಡೆಯಬೇಕಾಗುತ್ತಿತ್ತು.
ಆದ್ದರಿಂದ ಈ ಯೋಜನೆಯ ವಿರುದ್ಧ ಮೀನುಗಾರರು ಪ್ರತಿಭಟನೆ ನಡೆಸಿದ್ದರು. 2020 ರಲ್ಲಿ ಸ್ಥಳೀಯ ಮೀನುಗಾರರು ಕೋರ್ಟ್ ಮೆಟ್ಟಿಲೇರಿ ಯೋಜನೆಗೆ ತಡೆ ತಂದಿದ್ದರು. ಇತ್ತೀಚೆಗಷ್ಟೇ ತಡೆಯನ್ನು ತೆರವುಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು, ಈ ಯೋಜನೆಗಾಗಿ 1,800 ಕೋಟಿ ರೂಪಾಯಿ ಬಜೆಟ್ ಅನುದಾನ ನೀಡಲಾಗಿದೆ.





