ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ರಾಜೀನಾಮೆ
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಅವರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.
ಬಳಿಕ ಮಾತನಾಡಿದ ಇಬ್ರಾಹಿಂ, ‘ಗುರುವಾರದ ದಿನ ಎಲ್ಲ ಧರ್ಮಗಳಿಗೆ ಶ್ರೇಷ್ಠವಾದದ್ದು. ಇಂದು ರಾಜೀನಾಮೆ ಕೊಟ್ಟಿದ್ದೇನೆ, ನನ್ನ ಮುಂದಿನ ನಡೆ ಇಂದಿನಿಂದ ಆರಂಭ’ ಎಂದು ಹೇಳಿದರು.
‘ನನ್ನ ಮೇಲೆ ಏನು ಹೊರೆ ಇತ್ತು. ಅದನ್ನು ಕಳಚಿಕೊಂಡಿದ್ದೇನೆ. ನನ್ನ ಮುಂದಿನ ನಡೆಯನ್ನು ದೇವೆಗೌಡರ ಪಾಲಿಗೆ ಬಿಟ್ಟಿದ್ದೇನೆ. ಅವರು ಮಾರ್ಗದರ್ಶಕರು. ದೇಶಕ್ಕೆ ಮಾರ್ಗದರ್ಶನ ಕೊಟ್ಟವರು. ಕರ್ನಾಟಕ ರಾಜ್ಯದಲ್ಲಿ ವಯೋವೃದ್ಧ ರಾಜಕಾರಣಿ. ಅಜಾತ ಶತ್ರು’ ಎಂದರು.
‘ಯುಗಾದಿ ಮುಗಿದ ಮೇಲೆ ಎಪ್ರಿಲ್, ಮೇ ತಿಂಗಳಲ್ಲಿ ದೊಡ್ಡ ಪ್ರವಾಹ ಬರಲಿದೆ’ ಎಂದ ಇಬ್ರಾಹಿಂ, ‘ಸ್ವತಂತ್ರವಾಗಿ ನಾವೇ ಸರ್ಕಾರ ಮಾಡಬೇಕು ಎಂಬ ಶಕ್ತಿ ಜೆಡಿಎಸ್‌ಗೆ ಇದೆ. ಮೊದಲು ಜೆಡಿಎಸ್, ನಂತರ ಬಿಜೆಪಿ, ಕೊನೆಯಲ್ಲಿ ಕಾಂಗ್ರೆಸ್’ ಎಂದು ಭವಿಷ್ಯ ನುಡಿದರು.
‘ಯುಪಿ, ಪಂಜಾಬ್‌ನಲ್ಲಿ ಏನಾಯಿತೋ ಅದೇ ವಾತಾವರಣ ಕರ್ನಾಟಕದಲ್ಲೂ ಆಗಲಿದೆ. ನಾನು ಯಾವ ಪಕ್ಷವನ್ನು ಟೀಕೆ ಮಾಡುವುದಿಲ್ಲ ಯಾರನ್ನೂ ನಿಂದಿಸುವುದಿಲ್ಲ. ಅನ್ಯರ ಡೊಂಕು ನೀವೇಕೆ ತಿದ್ದುವಿರಯ್ಯ’ ಎಂದು ಬಸವಣ್ಣನ ವಚನವನ್ನು ಇಬ್ರಾಹಿಂ ಹೇಳಿದರು.





