ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್: ಮುತಾಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (ಎಂಕ್ಯುಎಂ-ಪಿ) ಪಕ್ಷವು ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್‌ನ (ಪಿಟಿಐ) ಮೈತ್ರಿಯನ್ನು ತೊರೆದು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದೆ. ಆ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ಬಹುಮತ ಕಳೆದುಕೊಂಡಿದೆ.
ಈ ಕುರಿತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಬುಧವಾರ ಮುಂಜಾನೆ ಟ್ವೀಟ್ ಮಾಡಿದ್ದು, ಪಿಪಿಪಿ ಮತ್ತು ಎಂಕ್ಯೂಎಂ-ಪಿ ಪಕ್ಷಗಳು ಮೈತ್ರಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಉಳಿಸಿಕೊಳ್ಳಲು 342 ಸದಸ್ಯ ಬಲದ ಸಂಸತ್ತಿನಲ್ಲಿ 172 ಮತಗಳನ್ನು ಪಡೆಯುವುದು ಅನಿವಾರ್ಯವಾಗಿದೆ.
ಆಡಳಿತಾರೂಢ ಪಕ್ಷದೊಂದಿಗೆ ಮೈತ್ರಿಯಲ್ಲಿದ್ದ 23 ಸದಸ್ಯರು ಇಮ್ರಾನ್ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ.





