ನಟಿ ಸೋನಮ್ ಕಪೂರ್ ಮಾವನಿಗೆ ಸೇರಿದ ಕಂಪೆನಿಯಿಂದ 27 ಕೋಟಿ ರೂ. ವಂಚನೆ: ದೂರು ದಾಖಲು
ಫರೀದಾಬಾದ್: ಬಾಲಿವುಡ್ ನಟಿ ಸೋನಮ್ ಕಪೂರ್ ಅವರ ಮಾವನಿಗೆ ಸೇರಿದ ಆಮದು-ರಫ್ತು ಕಂಪೆನಿ ಎಕ್ಸಿಮ್ ಫರ್ಮ್ ಗೆ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಫರೀದಾಬಾದ್ ಪೊಲೀಸರು ಸೈಬರ್ ಅಪರಾಧಿ ಗ್ಯಾಂಗ್ ವೊಂದನ್ನು ಭೇದಿಸಿದ್ದಾರೆ. ಪ್ರಕರಣದಲ್ಲಿ ಸುಮಾರು 27 ಕೋಟಿ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ವಂಚಕರು ಸೋನಮ್ ಕಪೂರ್ ಅವರ ಪತಿಯ ತಂದೆ ಹರೀಶ್ ಅಹುಜ ಅವರ ಫರಿದಾಬಾದ್ ಮೂಲದ ಸಂಸ್ಥೆ ಶಶಿ ಎಕ್ಸ್ ಪೋರ್ಟ್ ಫ್ಯಾಕ್ಟರಿಯನ್ನು ವ್ಯವಹಾರದಲ್ಲಿ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಹರೀಶ್ ಅಹುಜ ಅವರ ನಕಲಿ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರದ ಆಧಾರದ ಮೇಲೆ ಅವರ ಸಂಸ್ಥೆಗೆ ಮೀಸಲಾದ ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಮತ್ತು ಲೆವಿಗಳ ಪರವಾನಗಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇದೊಂದು ಉನ್ನತ ಮಟ್ಟದ ಸೈಬರ್ ವಂಚನೆಯಾಗಿದ್ದು ವಂಚಕರು ವಂಚನೆ ಎಸಗಲು ಬಳಸಿದ ಕಾರ್ಯವಿಧಾನಗಳನ್ನು ಫರಿದಾಬಾದ್ ಪೊಲೀಸ್ ಆಯುಕ್ತ ನಿತೀಶ್ ಅಗರ್ವಾಲ್ ವಿವರಿಸಿದ್ದಾರೆ. ಸರ್ಕಾರವು ROSCTL ಪರವಾನಗಿಗಳ ರೂಪದಲ್ಲಿ ರಫ್ತು ಸಂಸ್ಥೆಗಳಿಗೆ ಕೆಲವು ಪ್ರೋತ್ಸಾಹಗಳನ್ನು ನೀಡುತ್ತದೆ, ಅಬಕಾರಿ ಮತ್ತು ಕಸ್ಟಮ್ಸ್ ಸುಂಕಗಳಲ್ಲಿ ಕೆಲವು ರಿಯಾಯಿತಿಗಳಿಗೆ ಅರ್ಹತೆ ನೀಡುತ್ತದೆ.
ಈ ROSCTL ಪರವಾನಗಿಗಳು ಹಲವಾರು ಲಕ್ಷ ರೂಪಾಯಿ ಮೌಲ್ಯದ ಡಿಜಿಟಲ್ ಕೂಪನ್‌ಗಳಿಗೆ ಹೋಲುತ್ತವೆ ಎಂದು ಡಿಸಿಪಿ ಹೇಳುತ್ತಾರೆ. ವಂಚಕರು ಅಹುಜಾ ಅವರ ಸಂಸ್ಥೆಯ 27.61 ಕೋಟಿ ಮೌಲ್ಯದ ಒಟ್ಟು 154 ROSCTL ಗಳನ್ನು ಪಡೆದುಕೊಂಡು ವರ್ಗಾಯಿಸಿದ್ದಾರೆ. ಅವುಗಳನ್ನು ನಕಲಿ ಮತ್ತು ಕಾಲ್ಪನಿಕ ಸಂಸ್ಥೆಗಳಿಗೆ ತೆರೆಯಲಾಗಿದೆ.
ಈ ಬಗ್ಗೆ ಸೋನಮ್ ಅಹುಜಾ ಅವರ ಮಾವ ಕಳೆದ ವರ್ಷ ಜುಲೈಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಫರೀದಾಬಾದ್ ಪೊಲೀಸರು ಸದ್ದಿಲ್ಲದೆ ತನಿಖೆ ಕಾರ್ಯಾಚರಣೆ ನಡೆಸಿ ಕರ್ನಾಟಕ, ದೆಹಲಿ, ಮುಂಬೈ, ಚೆನ್ನೈ ಹೀಗೆ ದೇಶದ ವಿವಿಧ ಭಾಗಗಳಲ್ಲಿ ಸೈಬರ್ ಮೂಲಕ ವಂಚನೆ ನಡೆಸುತ್ತಿದ್ದ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.




