“ನನ್ನ ವಿರೋಧಿಗೆ ಮತಹಾಕುವ ಹಿಂದೂಗಳ ಮೈಯಲ್ಲಿ ಹರಿಯುವುದು ಮುಸ್ಲಿಮರ ರಕ್ತ”: ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿಗೆ ಚುನಾವಣಾ ಪ್ರಚಾರ ನಿರ್ಬಂಧ
ನವದೆಹಲಿ: ಕೋಮು ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ, ಉತ್ತರ ಪ್ರದೇಶದ ಡುಮರಿಯಾಗಂಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪ್ರತಾಪ್ ಸಿಂಗ್ ಅವರು ಚುನಾವಣಾ ಪ್ರಚಾರ ನಡೆಸುವುದನ್ನು ನಿರ್ಬಂಧಿಸಲಾಗಿದೆ.
ಸೋಮವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
‘ನನ್ನ ವಿರೋಧಿ ಪಾಳಯಕ್ಕೆ ಮತಹಾಕುವ ಹಿಂದೂಗಳ ಮೈಯಲ್ಲಿ ಹರಿಯುವುದು ಮುಸ್ಲಿಮರ ರಕ್ತ’ ಎಂಬುದಾಗಿ ರಾಘವೇಂದ್ರ ಸಿಂಗ್ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊ ಪರಿಶೀಲಿಸಿದ ಬಳಿಕ ಆಯೋಗ ಈ ಕ್ರಮ ತೆಗೆದುಕೊಂಡಿದೆ.
ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿವರಣೆ ನೀಡಲು ಕೊಟ್ಟಿರುವ ಸಮಯ ಸಾಕಾಗುವುದಿಲ್ಲ ಎಂದಿದ್ದ ಸಿಂಗ್ಗೆ ಹೆಚ್ಚುವರಿ ಸಮಯ ನೀಡಲು ಆಯೋಗ ನಿರಾಕರಿಸಿದೆ. ವಿಡಿಯೊದಲ್ಲಿ ತಾವು ಹೇಳಿದ ಪೂರ್ಣ ಮಾತು ದಾಖಲಾಗಿಲ್ಲ ಎಂದಿದ್ದಾರೆ.