ವೃದ್ಧರಿಗೆ ಉಚಿತ ಅಯೋಧ್ಯೆ ರಾಮಮಂದಿರ ಯಾತ್ರೆ:
ದೆಹಲಿ ಸಿಎಂ ಕೇಜ್ರಿವಾಲ್ ಘೋಷಣೆ

ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯ ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆಯನ್ನು ಸೇರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಬುಧವಾರ ಹೇಳಿದ್ದಾರೆ.
ಇಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ದೆಹಲಿ ಸರ್ಕಾರದ ‘ಮುಖ್ಯ ಮಂತ್ರಿ ತೀರ್ಥ ಯಾತ್ರಾ ಯೋಜನೆ’ ವಯಸ್ಸಾದವರಿಗೆ ಉಚಿತವಾಗಿರುತ್ತದೆ ಎಂದು ಹೇಳಿದರು. ವೈಷ್ಣೋದೇವಿ, ರಾಮೇಶ್ವರಂ, ದ್ವಾರಕಾ ಪುರಿ, ಹರಿದ್ವಾರ, ಋಷಿಕೇಶ, ಮಥುರಾ ಮತ್ತು ವೃಂದಾವನ ಈ ಯೋಜನೆಯಡಿ ಈಗಾಗಲೇ ಸೇರ್ಪಡೆಗೊಂಡಿರುವ ಯಾತ್ರಾ ಸ್ಥಳಗಳು. ಈ ಯೋಜನೆಯಡಿ 35,000 ಕ್ಕೂ ಹೆಚ್ಚು ಹಿರಿಯ ನಾಗರಿಕರು ತೀರ್ಥಯಾತ್ರೆ ಕೈಗೊಂಡಿದ್ದಾರೆ.
ವಯೋವೃದ್ಧರು ಸಹ ಒಬ್ಬ ಸದಸ್ಯ/ಬಂಧುಗಳನ್ನು ಕರೆದುಕೊಂಡು ಬರಬಹುದು, “ಕೋವಿಡ್-19 ಕಾರಣದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿರುವ ಯೋಜನೆಯನ್ನು ಬಹುಶಃ ಒಂದು ತಿಂಗಳೊಳಗೆ ಪುನರಾರಂಭಿಸಲಾಗುವುದು” ಎಂದು ಅವರು ಹೇಳಿದರು.
‘ಮುಖ್ಯ ಮಂತ್ರಿ ತೀರ್ಥ ಯಾತ್ರಾ ಯೋಜನೆ’ ಅಡಿಯಲ್ಲಿ, ಹಿರಿಯ ನಾಗರಿಕರಿಗೆ ಎಸಿ ರೈಲುಗಳಲ್ಲಿ ಪ್ರಯಾಣ ಮತ್ತು ಎಸಿ ಹೋಟೆಲ್‌ಗಳಲ್ಲಿ ತಂಗಲು ಮತ್ತು ಎಲ್ಲಾ ವೆಚ್ಚಗಳನ್ನು ದೆಹಲಿ ಸರ್ಕಾರವು ಭರಿಸುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ದೆಹಲಿ ನಿವಾಸಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಹೇಳಿದರು.
ರಾಮ್ ಲಲ್ಲಾ ಅವರ ಮುಂದೆ ನಮಸ್ಕರಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಮತ್ತು ಎಲ್ಲರಿಗೂ ಈ ಅವಕಾಶ ಸಿಗಬೇಕು ಎಂದು ನಾನು ಬಯಸುತ್ತೇನೆ. ನನ್ನಲ್ಲಿ ಏನೇ ಸಾಮರ್ಥ್ಯವಿದ್ದರೂ ಅದನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ದರ್ಶನ ಸಿಗುವಂತೆ ಮಾಡುತ್ತೇನೆ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು.