February 2, 2026

ರಾಜ್ಯದಲ್ಲಿ ಹಿಜಾಬ್-ಕೇಸರಿ ವಿವಾದ: ಒಟ್ಟು 20 ಜನರ ಬಂಧನ

0
IMG_20220211_182529.jpg

ಬೆಂಗಳೂರು: ಹಿಜಾಬ್‌–ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ನಡೆದ ದಾಂಧಲೆ, ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಗುರುವಾರ ಒಟ್ಟು 20 ಜನರನ್ನು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ನವನಗರದ ಸೆಕ್ಟರ್ ನಂ 38ರಲ್ಲಿನ ಮಸೀದಿ ಬಳಿ ಪ್ರಚೋದನಕಾರಿ ವರ್ತನೆ ಹಾಗೂ ನಂತರ ನಡೆದ ಥಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಸೀದಿ ಎದುರು ಬುಧವಾರ ಸಂಜೆ ಕೇಸರಿ ಬಾವುಟ ಕಟ್ಟಿದ್ದ ಎರಡು ಬೈಕ್ ಗಳಲ್ಲಿ ಬಂದಿದ್ದ ನಾಲ್ವರು ಪ್ರಚೋದನಕಾರಿಯಾಗಿ ವರ್ತಿಸಿದ್ದರು. ಈ ವೇಳೆ ಅವರಲ್ಲಿ ಒಬ್ಬನನ್ನು ಹಿಡಿದು ಸ್ಥಳೀಯರು ಥಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಥಳಿತಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದರು. ಈ ವೇಳೆ ಮಸೀದಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಸುದ್ದಿ ಹರಡಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳದಲ್ಲಿ ಜಮಾಯಿಸಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ಗುಂಪುಗಳು ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದವು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಪ್ರಚೋದನ ಕಾರಿಯಾಗಿ ವರ್ತಿಸಿದ ಹಿಂದೂ ಸಮುದಾಯದ ನಾಲ್ವರು ಹಾಗೂ ಆ ಗುಂಪಿನಲ್ಲಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ್ದ ಆರು ಮಂದಿ ಮುಸ್ಲಿಮರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆಒಪ್ಪಿಸಲಾಗಿದೆ. ‘ಮಸೀದಿ ಎದುರು ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿನ ದೃಶ್ಯಾವಳಿ ಪರಿಶೀಲಿಸಿದ್ದು, ಕಲ್ಲು ತೂರಾಟ ನಡೆದಿಲ್ಲ.

ಬದಲಿಗೆ ಯುವಕರ ಗುಂಪು ಸ್ಥಳೀಯರನ್ನು ಪ್ರಚೋದಿಸಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್‌ ತಿಳಿಸಿದರು.

ಹರಿಹರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಮಂಗಳವಾರ ನಡೆದ ದಾಂದಲೆಗೆ ಸಂಬಂಧಿಸಿ ನಗರ ಠಾಣೆ ಪೊಲೀಸರು ಗುರುವಾರ ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎರಡೂ ಕಡೆಯ ಹಲವರು ಬಂಧನದ ಭಯದಲ್ಲಿ ಈಗಾಗಲೇ ಊರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಬುಧವಾರ ನಡೆದ ಯುವಕನ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿ ಎರಡೂ ಗುಂಪಿನ 23 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!