ಗರೋಡಿ ಕ್ಷೇತ್ರದಿಂದ ಸ್ವಾಭಿಮಾನದ ಜಾಥಾ’ಕ್ಕೆ ಚಾಲನೆ
ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಕಾಂಗ್ರೆಸ್ ಪಕ್ಷದಿಂದ ‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ ಇಂದು ಬೆಳಗ್ಗೆ ಪ್ರಾರಂಭವಾಗಿದೆ.
ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಕ್ಷೇತ್ರದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಸ್ವಾಭಿಮಾನ ನಡಿಗೆಗೆ ಚಾಲನೆ ನೀಡಲಾಯಿತು.
ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತಿಯಲ್ಲಿ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.
ಜಾಥಾ ಆರಂಭದಲ್ಲಿ ಮಾತನಾಡಿದ ಹರೀಶ್ ಕುಮಾರ್, “ಜನಾರ್ಧನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಯುವ ಈ ನಡಿಗೆ ಇದು ರಾಜಕೀಯ ಪ್ರೇರಿತವಾದ ಹೋರಾಟ ಅಲ್ಲ ಸ್ವಾಭಿಮಾನದ ನಡಿಗೆ.
ಇಲ್ಲಿ ಪಕ್ಷ, ಧರ್ಮ ಜಾತಿ ಬೇಧ ಮರೆತು ಹಳದಿ ಶಾಲಿನ ಗೌರವದೊಂದಿಗೆ ನಡೆಯುತ್ತಿದೆ” ಎಂದರು.
ಈ ಜಾಥಾದಲ್ಲಿ ಘೋಷಣೆಗಳಿರುವುದಿಲ್ಲ. ಯಾರ ವಿರುದ್ಧವೂ ಧಿಕ್ಕಾರ ಕೂಗಲು ಅವಕಾಶವಿಲ್ಲ. ಭಾಗವಹಿಸುವ ವಾಹನಗಳು ನಾರಾಯಣಗುರುಗಳು ಶಾಂತಿಯ ಸಂಕೇತವಾಗಿ ನೀಡಿರುವ ಹಳದಿ ಪತಾಕೆಯನ್ನು ಹಾಗೂ ಭಾಗವಹಿಸುವ ನಾರಾಯಣ ಗುರುಗಳ ಅನುಯಾಯಿಗಳು ಹಳದಿ ಶಾಲು ಮಾತ್ರ ಧರಿಸಲು ಅವಕಾಶವಿರುತ್ತದೆ ಸಂಘಟಕರು ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿರುವ ಕ್ರಾಂತಿ, ಶಾಂತಿಯುತ ಸಂಘರ್ಷ ರಹಿತ ಕ್ರಾಂತಿಗಳು. ಆ ಪ್ರಕಾರ ಗಣರಾಜ್ಯೋತ್ಸವದಂದು ಕರಾವಳಿ ಜಿಲ್ಲೆಗಳಲ್ಲಿ ನಾರಾಯಣಗುರು ಸ್ವಾಭಿಮಾನ ಜಾಥಾ ನಡಿಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ವಿವಿಧ ತಾಲೂಕುಗಳಿಂದ ನಾರಾಯಣಗುರುಗಳ ಟ್ಯಾಬ್ಲೋ ಹಾಗೂ ಭಜನಾ ತಂಡಗಳು ಆಯ್ದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 6ಕ್ಕೆ ಗೋಕರ್ಣನಾಥ ಕ್ಷೇತ್ರ ತಲುಪಲಿವೆ.
ಬಿಲ್ಲವ ಸಮುದಾಯದ ವತಿಯಿಂದ ಹೊರಡುವ ಸ್ತಬ್ಧಚಿತ್ರ ಗರೋಡಿ ಕ್ಷೇತ್ರದಿಂದ ಹೊರಟಿದ್ದು ಪಂಪ್‌ವೆಲ್ ಸರ್ಕಲ್, ಕರಾವಳಿ ಜಂಕ್ಷನ್, ಅಂಬೇಡ್ಕರ್ ವೃತ್ತ ಹಾಗೂ ಹಂಪನಕಟ್ಟ ಸಿಗ್ನಲ್‌ನಿಂದ ಕೆ.ಎಸ್.ರಾವ್ ರೋಡ್, ನವಭಾರತ್ ಸರ್ಕಲ್, ಪಿವಿಎಸ್‌ಜಂಕ್ಷನ್, ಎಂಜಿ.ರಸ್ತೆ, ಲಾಲ್‌ಬಾಗ್, ಲೇಡಿಹಿಲ್ ಸರ್ಕಲ್ ಆಗಿ ಕ್ಷೇತ್ರಕ್ಕೆ ತಲುಪಲಿದೆ.
ಬೈಂದೂರು, ಕಾರ್ಕಳ, ಉಡುಪಿ, ಮುಲ್ಕಿ, ಪುತ್ತೂರು, ಬಂಟ್ವಾಳದಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ಒಟ್ಟು ಸೇರಿಕೊಂಡು ಕ್ಷೇತ್ರಕ್ಕೆ ತಲುಪಲಿದೆ.





