ಮಂಗಳೂರು: ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗಿ
ಮಂಗಳೂರು: ನಾರಾಯಣ ಗುರುಗಳಿಗೆ ಅಪಮಾನ ಆಗಿದೆಯೆಂದು ಕಾಂಗ್ರೆಸಿನ ಸ್ವಾಭಿಮಾನಿ ವೇದಿಕೆ ವತಿಯಿಂದ ಹಮ್ಮಿಕೊಂಡ ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.
ಡಿ.ಕೆ ಶಿವಕುಮಾರ್ ಮಧ್ಯಾಹ್ನ 2.45 ಕ್ಕೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದು ಅಲ್ಲಿಂದ ನೇರವಾಗಿ ಸ್ವಾಭಿಮಾನಿ ವೇದಿಕೆ ಹಮ್ಮಿಕೊಂಡ ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿಯಿದೆ.
ಕಾಂಗ್ರೆಸ್ ನಾಯಕರು ನೀಡಿರುವ ರೂಟ್ ಮ್ಯಾಪ್ ಪ್ರಕಾರ, ಬೆಳಗ್ಗೆ ಎಂಟು ಗಂಟೆಗೆ ಗರೋಡಿ ಬ್ರಹ್ಮ ದೈದರ್ಕಳ ದೇವಸ್ಥಾನದಲ್ಲಿ ಹೊರಡುವ ನಾರಾಯಣ ಗುರುಗಳ ಸ್ತಬ್ಧಚಿತ್ರ ಅಲ್ಲಿಂದ ಮಂಗಳೂರಿನ ವಿವಿಧೆಡೆಗಳಿಗೆ ತೆರಳಲಿದ್ದು ಸಂಜೆ ನಾಲ್ಕು ಗಂಟೆಗೆ ಉರ್ವಾ ಸ್ಟೋರ್ ತಲುಪಲಿದೆ. ಅಲ್ಲಿಂದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಕಾಲ್ನಡಿಗೆಯಲ್ಲಿ ಕುದ್ರೋಳಿ ಕ್ಷೇತ್ರಕ್ಕೆ ತೆರಳಲಿದ್ದಾರೆ.
ಡಿಕೆ ಶಿವಕುಮಾರ್ ಮಂಗಳೂರಿನಲ್ಲಿ 4.30 ಕ್ಕೆ ನಾರಾಯಣ ಗುರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಪ್ರವಾಸ ಕಾರ್ಯಕ್ರಮದಲ್ಲಿದೆ. ಎಲ್ಲಿಗೆ ಸೇರುತ್ತಾರೆ ಎನ್ನುವುದನ್ನು ದೃಢಪಡಿಸಿಲ್ಲ. ಉರ್ವಾ ಸ್ಟೋರ್ ಬಳಿಯಿಂದ ನಡೆಯುವ ಕಾಲ್ನಡಿಗೆ ಕಾರ್ಯಕ್ರಮದಲ್ಲಿ ಡಿಕೆಶಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಡಿಕೆಶಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಶಕ್ತಿ ಪ್ರದರ್ಶನದ ರೂಪ ಪಡೆಯುವ ಸಾಧ್ಯತೆ ಇದ್ದು ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ.





