ಮಂಗಳಗಂಗೋತ್ರಿ: ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ “ರಾಷ್ಟ್ರೀಯ ಮತದಾನ ದಿನಾಚರಣೆ”
ಮಂಗಳಗಂಗೋತ್ರಿ: ರಾಷ್ಟ್ರೀಯ ಮತದಾನ ದಿನಾಚರಣೆಯ ಕಾರ್ಯಕ್ರಮವನ್ನು ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಇಸ್ಮಾಯಿಲ್ ಶಫಿಯುಲ್ಲಾರವರು, 2011ರ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸುತ್ತಾ ತಮ್ಮ ಕಾಲೇಜಿನಲ್ಲಿ ಮಹಾಅಭಿಯಾನದ ಅಡಿಯಲ್ಲಿ 70ರಷ್ಟು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋಹನ್ ಎಸ್ ಸಿಂಘೇರವರು ಮುಖ್ಯ ಅತಿಥಿಯಾಗಿ ಮಾತನಾಡಿ, ಅಂಬೇಡ್ಕರ್‍ರವರ ವಿಶೇಷ ಮುತುವರ್ಜಿ ಮತ್ತು ಆಸಕ್ತಿಯಿಂದ ದೊರೆತ ಮತದಾನದ ಹಕ್ಕನ್ನು ಇಂದು ಅನೇಕರು ಸರಿಯಾಗಿ ಚಲಾಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾ ಇಂದು ರಾಷ್ಟ್ರೀಯ ಮತದಾನದ ದಿನದಂದು ಮತದಾನದಲ್ಲಿ ನಾವೆಲ್ಲ ಸಕ್ರಿಯವಾಗಿ ಪಾಲ್ಗೊಳ್ಳುವ ಪ್ರತಿಜ್ಞೆಯನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ನಂತರ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತದಾನ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಚೈತ್ರಾರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಕುಮಾರಿ ಶಿಲ್ಪರವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಯವರು ಉಪಸ್ಥಿತರಿದ್ದರು.





