ಉಸ್ತುವಾರಿ ಸಚಿವರ ಬದಲಾವಣೆ:
ಆನಂದ್ ಸಿಂಗ್ ಅಭಿಮಾನಿಗಳಿಂದ ಆಕ್ರೋಶ
ಹೊಸಪೇಟೆ: ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ ಬೆನ್ನಲ್ಲೇ ಆನಂದ್ ಸಿಂಗ್ ಅವರ ಸ್ವಕ್ಷೇತ್ರ ಹೊಸಪೇಟೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.
ಸ್ವಂತ ಜಿಲ್ಲೆಯ ಸಚಿವರುಗಳಿಗೆ ಬೇರೆ ಜಿಲ್ಲೆ ಉಸ್ತುವಾರಿ ನೀಡಲಾಗಿದ್ದು, ಈ ಹಿಂದೆ ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಆನಂದ್ ಸಿಂಗ್ ಅವರಿಗೆ ಇದೀಗ ಕೊಪ್ಪಳ ಜಿಲ್ಲೆ ಜವಾಬ್ದಾರಿ ನೀಡಲಾಗಿದೆ.
ವಿಜಯನಗರ ಜಿಲ್ಲಾ ಉಸ್ತುವಾರಿಯನ್ನು ಶಶಿಕಲಾ ಜೊಲ್ಲೆ ಅವರಿಗೆ ನೀಡಲಾಗಿದೆ. ಇದರಿಂದ ಆನಂದ್ ಸಿಂಗ್ ಅಭಿಮಾನಿಗಳು ಹೊಸಪೇಟೆಯಲ್ಲಿ ದಿಢೀರ್ ಪ್ರತಿಭಟನೆಗಿಳಿದಿದ್ದಾರೆ.
ವಿಜಯನಗರದಿಂದ ಆನಂದ್ ಸಿಂಗ್ ಅವರನ್ನ ಬದಲಾವಣೆ ಮಾಡಿರುವುದಕ್ಕೆ ಹೊಸಪೇಟೆಯ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಅಭಿಮಾನಿಗಳು ಪ್ರತಿಭಟನೆ ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಆನಂದ್ ಸಿಂಗ್, ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿದ್ದು ಕಂಡು ಆಕ್ರೋಶಗೊಂಡರು. ಅಲ್ಲದೇ ಫೈರ್ ಇಂಜಿನ್ ತರಿಸಿ ಬೆಂಕಿ ನಂದಿಸಿದರು.
ಬಳಿಕ ಮಾತನಾಡಿದ ಆನಂದ್ ಸಿಂಗ್, ಇವೆಲ್ಲಾ ತಾಂತ್ರಿಕ ಸಮಸ್ಯೆಗಳು. ನಾನು ಒಪ್ಪಿದ ನಂತರವೇ ಉಸ್ತುವಾರಿ ಬದಲಾವಣೆ ಆಗಿದೆ. ಎಲ್ಲವನ್ನೂ ಹೊರಗಡೆ ಹೇಳುವ ಹಾಗಿಲ್ಲ ಎಂದು ಅಭಿಮಾನಿಗಳನ್ನ ಸಮಾಧಾನಪಡಿಸಿದರು.




