February 2, 2026

ವಿಟ್ಲ: ನಾರಾಯಣ ಗುರುಗಳ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದ ಕೇಂದ್ರ ಸರಕಾರ ಆರೋಪ:
ಆಕ್ರೋಶ ವ್ಯಕ್ತಪಡಿಸಿದ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್

0
IMG_20220119_195647.jpg

ವಿಟ್ಲ: ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿ, ಕಂದಾಚಾರಗಳನ್ನು ನಿವಾರಿಸಿದ ಮಹಾಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಹೊಂದಿದ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದ ಕೇಂದ್ರ ಸರಕಾರದ ಕ್ರಮ ಖಂಡನೀಯವಾಗಿದೆ. ಹಿಂದೂ ಧರ್ಮ ಸುಧಾರಕರಾಗಿದ್ದ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಮಹಾತ್ಮ ಗಾಂಧೀಜಿ, ವಿಶ್ವಕವಿ ರವೀಂದ್ರನಾಥ್ ಠಾಗೋರ್, ವಿನೋಭಾ ಭಾವೆಯಂತಹ ಮಹಾನ್ ವ್ಯಕ್ತಿಗಳೇ ಒಪ್ಪಿಕೊಂಡು ಗುರುಸ್ಥಾನದಲ್ಲಿ ಗೌರವಿಸಿದ್ದಾರೆ. ಕೇಂದ್ರ ಸರಕಾರದ ಈ ಕ್ರಮ ಗುರುಗಳಿಗೆ, ಗುರುಗಳ ಅನುಯಾಯಿಗಳಿಗೆ ಮಾಡಿದ ಅವಮಾನ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಬಿ.ರಾಜಾರಾಮ್ ತಿಳಿಸಿದರು.

ಅವರು ವಿಟ್ಲ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದೆಲ್ಲಡೆ ದೇವರೆಂದೇ ಪೂಜಿಸಲ್ಪಡುವ ಗುರುಗಳ ಪ್ರತಿಮೆ ಇರಿಸುವುದಕ್ಕೆ ಕೇರಳ ರಾಜ್ಯ ಶಿಫಾರಸ್ಸು ಮಾಡಿದ್ದರೂ ಪ್ರತಿಮೆ ಬದಲಾಯಿಸಲು ಸೂಚನೆ ನೀಡಿದ ಕೇಂದ್ರದ ನಡೆಯ ಬಗ್ಗೆ ಗುರುಗಳ ಭಕ್ತರೆಲ್ಲರೂ ದು:ಖ, ನಿರಾಸೆ ಪಡುವಂತಾಗಿದೆ. ವಿದ್ಯೆ ಮತ್ತು ಸಂಘಟನೆಯ ಮಹತ್ವವನ್ನು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ನೀಡಿದ ಕೊಡುಗೆಯನ್ನು ಕಡೆಗಣಿಸಿದ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಗುರುದೇವನ ಪ್ರತಿಮೆ ಇರುವ ಸ್ಥಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿ ದೇಶ ಕಂಡ ಅತ್ಯಪೂರ್ವ ಮಹಾಪುರುಷರಲ್ಲೊಬ್ಬರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕೇ ನಮಗೆಲ್ಲರಿಗೂ ದಿವ್ಯ ಸಂದೇಶವಾಗಿದೆ. ಎಂತಹ ಕಠಿಣ ಸಂದರ್ಭ ಬಂದರೂ ಸಹ ಸಂಘರ್ಷವನ್ನು ಬಯಸದೇ, ಶಾಂತಿಯುತವಾಗಿ ಪರಿಹಾರ ಕಂಡುಕೊಂಡು ಪರಿವರ್ತನಾ ಸಮಾಜವನ್ನು ಹುಟ್ಟುಹಾಕಿದ ಧೀಶಕ್ತಿಯನ್ನು ಅರ್ಥೈಸದೇ ಕೇಂದ್ರ ಸರಕಾರ ಅವರನ್ನು ಅವಮಾನಿಸಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ಶೆಟ್ಟಿ ಮಠಂತಬೆಟ್ಟು, ಬ್ಲಾಕ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಮೈರುಂಡ, ಕಾಂಗ್ರೆಸ್ ವಕ್ತಾರ ರಮಾನಾಥ್ ವಿಟ್ಲ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಬ್ಲಾಕ್ ಕಾರ್ಯದರ್ಶಿಗಳಾದ ರಶೀದ್ ವಿಟ್ಲ, ಎಸ್ ಕೆ ಮಹಮ್ಮದ್ ವಿಟ್ಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!