March 20, 2026

ಬೆಳ್ಳಾರೆ ಠಾಣೆಯಲ್ಲಿ ವ್ಯಕ್ತಿಯ ಬೆತ್ತಲಾಗಿಸಿ ಹಲ್ಲೆ ಆರೋಪ: ವೀಡಿಯೋ ವೈರಲ್

0
Screenshot_20220119-194459_WhatsAppBusiness.jpg

ಬೆಳ್ಳಾರೆ: ಪೋಲಿಸರು ತನ್ನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದು, ತನಗೆ ನ್ಯಾಯ ಸಿಗಬೇಕೆಂದು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಜನವರಿ 18ರಂದು ನಡೆದಿತ್ತು.

ಬೆಳ್ಳಾರೆ ಸಮೀಪದ ಪಾಲ್ತಾಡಿ‌ನ ಅಜಿತ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಯಬಿಟ್ಟಿದ್ದು ಅದರಲ್ಲಿ ತನಗೆ ಬೆಳ್ಳಾರೆ ಪೊಲೀಸರು ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವು ಮುಖಂಡರು ಆತನನ್ನು ಠಾಣೆಗೆ ಕರೆದೊಯ್ದು ಪರಸ್ಪರ ಮಾತುಕತೆ ನಡೆಸಿ ವಿಷಯವನ್ನು ಇತ್ಯರ್ಥಗೊಳಿಸಿದ್ದರು.

ಜ14 ರಂದು ಅಜಿತ್ ಎಂಬಾತ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದಿದ್ದು, ತನಗೆ ಆಟೋ ಚಾಲಕನಿಂದ ಹಲ್ಲೆಯಾಗಿದೆ ಎಂದು ದೂರು ನೀಡಿದ್ದ. ಮರುದಿನ ಅಂದರೆ ಜ.15 ರಂದು ಮಾರ್ಷಲ್ ಎಂಬ ಹೆಸರಿನ ಆಟೋ ಚಾಲಕ ಬೆಳ್ಳಾರೆ ಠಾಣೆಗೆ ಬಂದು ತನಗೆ ಅಜಿತ್ ಎಂಬಾತ ತನಗೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದ ಎಂದು ದೂರು ನೀಡಿದ್ದ. ಇಬ್ಬರನ್ನೂ ಕೂಡ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದ್ದು, ಇಬ್ಬರ ನಡುವೆ ಮಾತುಕತೆಯಾಗಿ ನಂತರ ರಾಜಿ ಸಂಧಾನ ಮಾಡಲಾಗಿತ್ತು.

ಜ. 16 ರಂದು ಬೆಳ್ಳಾರೆಯಲ್ಲಿ ಹೋಟೆಲ್ ಹೊಂದಿರುವ ಮಹಿಳೆಯೋರ್ವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು ತಮ್ಮ ಹೋಟೆಲ್ ಗೆ ಬಂದು ಅಜಿತ್ ಎಂಬಾತ ತನಗೆ ದೈವಶಕ್ತಿ ಮೈಮೇಲೆ ಬರುತ್ತಾನೆ,‌ ನನಗೆ ಅಪರಿಮಿತ ಶಕ್ತಿ ಇದೆ ಎಂದು‌ ಹೇಳುತ್ತಾ ವಿನಾಕಾರಣ ಕಿರುಕುಳ ನೀಡುತ್ತಿದ್ದು ಮೈಗೆ ಕೈ ಹಾಕಿರುವುದಾಗಿ ದೂರು ನೀಡಿದ್ದರು. ಈ ವಿಚಾರವಾಗಿ ಅಜಿತ್‌ ನನ್ನು ಮತ್ತೆ ಠಾಣೆಗೆ ಕರೆಸಿದ್ದು, ಪೊಲೀಸರು ವಿಚಾರಣೆ ನಡೆಸುವ ವೇಳೆ ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುವುದು ಅಲ್ಲದೇ ವಿಪರೀತ ಮದ್ಯ ಸೇವಿಸುವ ವಿಚಾರ ಬೆಳಕಿಗೆ ಬಂದಿತ್ತು.

ನಂತರ ಸ್ಥಳೀಯ ಇಬ್ಬರು ಮುಖಂಡರು ಠಾಣೆಗೆ ಬಂದಿದ್ದು, ಅಜಿತ್ ನನ್ನು ಠಾಣೆಯಿಂದ ಕರೆದುಕೊಂಡು ಹೋಗಿದ್ದರು.
ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಠಾಣೆಯಲ್ಲಿ ಬಂದು ದೂರು ನೀಡಿದ್ದ ಮಹಿಳೆ ಜನವರಿ 18ರಂದು ಅಜಿತ್ ನಮ್ಮನ್ನು ಬೆಳ್ಳಾರೆ ಪೇಟೆಯಲ್ಲಿ ನೋಡಿ ನನ್ನ ಮೇಲೆ ದೂರು ನೀಡಿದ ನಿಮ್ಮನ್ನು ಮುಂದಕ್ಕೆ ಬೆಳ್ಳಾರೆ ಪೇಟೆಯಲ್ಲಿ ಜೀವಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬೆಳ್ಳಾರೆ ಠಾಣೆಯಲ್ಲಿ ಇಂದು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!