ಹೈಕೋರ್ಟ್ ನ್ಯಾಯಮೂರ್ತಿ ಗನ್‌ಮ್ಯಾನ್‌ನ ಪಿಸ್ತೂಲ್ ಕಳವು
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಅವರ ಗನ್‌ಮ್ಯಾನ್ 10 ಜೀವಂತ ಗುಂಡುಗಳ ಸಮೇತ 9 ಎಂಎಂ ಪಿಸ್ತೂಲ್ ಕಳೆದುಕೊಂಡಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಮೂಲದ ಬಾಪೂಜಿನಗರದಲ್ಲಿ ನೆಲೆಸಿದ್ದ ಕಲ್ಲಯ್ಯ ಮಠಪತಿ(42) ಪಿಸ್ತೂಲ್ ಕಳೆದುಕೊಂಡವರು. ಭಾರತೀಯ ಸೇನೆಯಲ್ಲಿ 17 ವರ್ಷಗಳ ಸೇವೆ ಸಲ್ಲಿಸಿದ ಕಲ್ಲಯ್ಯ ಮಠಪತಿ, 2019ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು, ಸಿಎಆರ್ ಪಶ್ಚಿಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2020ರಿಂದ ಹೈಕೋರ್ಟ್ ನ್ಯಾಯಮೂರ್ತಿ ಅವರಿಗೆ ಗನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಡಿ.25ರಂದು ನ್ಯಾಯಮೂರ್ತಿಗೆ ಕರೆ ಮಾಡಿ ಊರಿಗೆ ಹೋಗಬೇಕಿರುವ ಕಾರಣ ಎರಡು ದಿನಗಳ ರಜೆ ಬೇಕೆಂದು ಕೇಳಿದ್ದರು. ಅದಕ್ಕೆ ನ್ಯಾಯಮೂರ್ತಿ ಒಪ್ಪಿಗೆ ನೀಡಿದ್ದರು. ಅದೇ ದಿನ ಸಂಜೆ 7 ಗಂಟೆಗೆ ಮನೆಯಲ್ಲೇ ಮದ್ಯಪಾನ ಮಾಡಿ 9 ಎಂ.ಎಂ. ಪಿಸ್ತೂಲ್, 10 ಜೀವಂತ ಗುಂಡುಗಳು ಹಾಗೂ ಬಟ್ಟೆಯನ್ನು ಬ್ಯಾಗ್‌ನಲ್ಲಿ ಹಾಕಿ ಕಲ್ಲಯ್ಯ ಮೆಜೆಸ್ಟಿಕ್‌ಗೆ ಬಂದಿದ್ದರು.




