ರಾಜ್ಯದಲ್ಲಿ ಇಂದು 12,000 ಜನರಲ್ಲಿ ಕೊರೊನಾ ಸೋಂಕು ದೃಢ: ದ. ಕ ದಲ್ಲಿ 298 ಪಾಸಿಟಿವ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಆತಂಕ ಹುಟ್ಟಿಸುವ ರೀತಿಯಲ್ಲಿ ಏರಿಕೆ ಕಾಣುತ್ತಿದೆ. ಶುಕ್ರವಾರ 8,449 ಜನರಿಗೆ ಹಾಗೂ ನಿನ್ನೆ (ಶನಿವಾರ) 8,906 ಕೊರೊನಾ ದೃಢಪಟ್ಟಿತ್ತು. ಆದರೆ ಇಂದು ಈ ಸಂಖ್ಯೆ ಭಾರೀ ನೆಗೆತ ಕಂಡಿದೆ.
ರಾಜ್ಯ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಟ್ವೀಟ್ ಮೂಲಕ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನ 9,020 ಜನರು ಸೇರಿ ರಾಜ್ಯದಲ್ಲಿ ಇಂದು ಒಟ್ಟು 12,000 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ 6.33 ನಷ್ಟಿದೆ. ರಾಜ್ಯದಲ್ಲಿ ಇಂದು 901 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು 49,602 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಸೋಂಕಿನಿಂದ ಇಂದು ಬೆಂಗಳೂರಿನ ಇಬ್ಬರು ಸೇರಿ ರಾಜ್ಯದಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 1,89,499 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.
ದ.ಕ. ಜಿಲ್ಲೆಯಲ್ಲಿ ರವಿವಾರ 298 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. 24 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇ.2.89 ದಾಖಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 1,17,641 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,14,669 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 1,705 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸದ್ಯ 1,267 ಸಕ್ರಿಯ ಪ್ರಕರಣವಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 92,348 ಪ್ರಕರಣ ದಾಖಲಿಸಿ, 1,11,61,030 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.




