ಕುದ್ರೋಳಿ: ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಮೃತದೇಹ ನದಿಯಲ್ಲಿ ಪತ್ತೆ
ಮಂಗಳೂರು: ಕುದ್ರೋಳಿ ಹೈದರಾಲಿ ರಸ್ತೆಯ ಬಳಿಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.
ಕುದ್ರೋಳಿ ಹೈದರಾಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಪುತ್ರಿ ಮುಫೀದಾ (11) ಮೃತಪಟ್ಟ ದುರ್ದೈವಿ.
ಬೆಳಿಗ್ಗೆ ಬಾಲಕಿ ಮನೆಯಿಂದ ಯಾರಲ್ಲಿಯೂ ಹೇಳದೇ ನಾಪತ್ತೆಯಾಗಿದ್ದಳು. ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಲಾಗಿತ್ತು. ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಪರಿಶೀಲಿಸಿದಾಗ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ನದಿ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ.
ಬಳಿಕ ಸ್ಥಳೀಯ ಯುವಕರು ಕುದ್ರೋಳಿಯ ಕಾರ್ಖಾನೆ ಸಮೀಪದ ನದಿಯಲ್ಲಿ ಶೋಧ ನಡೆಸಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಮುಫೀದಾ ಅಲ್ಪಪ್ರಮಾಣದಲ್ಲಿ ಬುದ್ದಿಮಾಂದ್ಯತೆ ಹೊಂದಿದ್ದು, ಮನೆಯವರು ಕೆಲಸದಲ್ಲಿ ನಿರತರಾಗಿದ್ದಾಗ ಬಾಗಿಲು ತೆಗೆದು ಹೊರಬಂದಿದ್ದಾಳೆ ಎನ್ನಲಾಗಿದೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





