ಪಾಕಿಸ್ತಾನದ ಪ್ರಧಾನಿ ಮಾಜಿ ಪತ್ನಿ ಕಾರಿನ ಮೇಲೆ ಗುಂಡು ಹಾರಾಟ
ಪಾಕಿಸ್ತಾನ: ಭಾನುವಾರ ರಾತ್ರಿ ತಾನು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, “ನನ್ನ ಸೋದರಳಿಯನ ಮದುವೆಯಿಂದ ಹಿಂತಿರುಗುವಾಗ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನನ್ನ ಕಾರನ್ನು ಅಡ್ಡಗಟ್ಟಿ ಗುಂಡು ಹಾರಿಸಿದ್ದಾರೆ.
ಆ ವೇಳೆ ನನ್ನ ಪಿಎಸ್ ಮತ್ತು ಡ್ರೈವರ್ ಕಾರಿನಲ್ಲಿದ್ದರು. ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನವೇ? ಹೇಡಿಗಳು, ಕೊಲೆಗಡುಕರು ಮತ್ತು ದುರಾಸೆಯ ರಾಜ್ಯಕ್ಕೆ ಸುಸ್ವಾಗತ” ಎಂದು ಬರೆದುಕೊಂಡಿದ್ದಾರೆ. ನನಗೆ ಗಾಯವಾಗದೆ ಇದ್ದರೂ ಘಟನೆಯಿಂದ ತುಂಬ ಕೋಪ ಬಂದಿದೆ. ಹಾಗೇ, ಜನಸಾಮಾನ್ಯರ ಬಗ್ಗೆ ಆತಂಕವಾಗುತ್ತಿದೆ. ಇದೊಂದು ಹೇಡಿತನದ ಕೃತ್ಯ ಎಂದು ಹೇಳಿದ್ದಾರೆ.
ರೆಹಮ್ ಖಾನ್ ಅವರು ಬ್ರಿಟಿಷ್-ಪಾಕಿಸ್ತಾನಿ ಮೂಲದವರು. ಮಾಜಿ ಟಿವಿ ನಿರೂಪಕಿ. 2014ರ ಅಕ್ಟೋಬರ್ 30ರಂದು ಇಮ್ರಾನ್ ಖಾನ್ರನ್ನು ಮದುವೆಯಾಗಿದ್ದರು. ನಂತರ 2015ರಲ್ಲಿ ವಿಚ್ಛೇದನ ನೀಡಿದ್ದಾರೆ.




