ಮಂಗಳೂರು: ಸುಳ್ಳು ಕೊಲೆ ಆರೋಪ ಹೊರಿಸಿ ಆಸ್ತಿ, ಹಣ ಸುಲಿಗೆಗೆ ಸಂಚು: ಆರೋಪಿ ಬಂಧನ
ಮಂಗಳೂರು: ಮಹಿಳೆಯೊಬ್ಬರ ಮೇಲೆ ಕೊಲೆಯಂತಹ ಗಂಭೀರವಾದ ಸುಳ್ಳು ಆರೋಪ ಹೊರಿಸಿ, ಹಣ ಹಾಗೂ ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿದ್ದ ಆರೋಪಿಯನ್ನು ಉರ್ವಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಕ್ತಿನಗರದ ಗಾನಮಜಲ್ ನಿವಾಸಿ ನವೀನ್ ಥೋರೆಸ್ (42) ಬಂಧಿತ ಆರೋಪಿ.
ಶ್ರೀಮತಿ ಮಾಯ ಅನ್ನಾಮೇರಿ ರೇಗೋ ಎಂಬುವರು ತಮ್ಮ ಮೇಲೆ ಕೊಲೆಯಂತಹ ಸುಳ್ಳು ಆರೋಪಗಳನ್ನು ಹೊರಿಸಿ, ಬೆದರಿಸಿ ಹಣ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಲಾಗಿದೆ ಹಾಗೂ ಸಾರ್ವಜನಿಕವಾಗಿ ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ರಿ ದೂರಿನನ್ವಯ ಉರ್ವಾ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 10, 2026 ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಉರ್ವಾ ಪೊಲೀಸರು, ಸೂಕ್ತ ಸಾಕ್ಷಾಧಾರಗಳ ಆಧಾರದ ಮೇಲೆ ಅಕ್ಟೋಬರ್ 23 ರಂದು ಆರೋಪಿ ನವೀನ್ ಥೋರೆಸ್ನನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಅಕ್ಟೋಬರ್ 24 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಗಂಭೀರ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಬಗ್ಗೆಯೂ ಕೂಲಂಕುಶ ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




