ಮಂಗಳೂರು: ಐಷಾರಾಮಿ ಬೈಕ್ಗಳ ಕಳವು ಪ್ರಕರಣ: ಮೂವರು ಅಪ್ರಾಪ್ತರು ಸೇರಿ 7 ಆರೋಪಿಗಳ ಬಂಧನ
ಮಂಗಳೂರು: ಮಂಗಳೂರು ನಗರ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಸರಣಿ ಐಷಾರಾಮಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (ಸೌತ್) ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ 6 ಐಷಾರಾಮಿ ಬೈಕ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರ ವಾಹನಗಳು ಸೇರಿ ಒಟ್ಟು ₹4.50 ಲಕ್ಷ ಮೌಲ್ಯದ 9 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳ ವಿವರ: ಮಹಮ್ಮದ್ ಸಿಯಾಮ್ (19) – ವಾಮಂಜೂರು ಮೂಡುಶೆಡ್ಡೆ ಶಿವನಗರ ನಿವಾಸಿ.ಮುಹಮ್ಮದ್ ನಾಸೀಫ್ @ ನಸೀಫ್ (19) – ಬೈಕಂಪಾಡಿ ಜೋಕಟ್ಟೆ ನಿವಾಸಿ.ಮೊಹಮ್ಮದ್ ರಾಹೀಲ್ (18) – ವಾಮಂಜೂರು ಮೂಡುಶೆಡ್ಡೆ ಶಿವನಗರ ನಿವಾಸಿ.ನಿಖೀಲ್ (18) – ಮಂಗಳೂರು ತಿರುವೈಲು ಕುಟ್ಟಿಪಲ್ಕೆ ನಿವಾಸಿ. ಉಳಿದ ಮೂವರು ಅಪ್ರಾಪ್ತ ಬಾಲಕರಾಗಿದ್ದಾರೆ
ಈ ಕಳ್ಳರ ಗ್ಯಾಂಗ್ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ (ಕೆಟಿಎಂ ಡ್ಯೂಕ್), ಜಪ್ಪು ಮಾರ್ಕೆಟ್ (ಯಮಹಾ ಎಫ್.ಜೆಡ್), ಅತ್ತಾವರ ಕೆಎಂಸಿ ಆಸ್ಪತ್ರೆ ಬಳಿ (ಬಜಾಜ್ ಡಿಸ್ಕವರಿ) ಹಾಗೂ ಹೊಯಿಗೆಬಜಾರ್ನ ಅಪಾರ್ಟ್ಮೆಂಟ್ ಕೆಳಗಿನಿಂದ (ಕೆಟಿಎಂ ಡ್ಯೂಕ್) ಒಟ್ಟು 4 ಬೈಕ್ಗಳನ್ನು ಕಳವು ಮಾಡಿತ್ತು. ಅಷ್ಟೇ ಅಲ್ಲದೆ, ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿಯಿಂದ ರಾಯಲ್ ಎನ್ ಫೀಲ್ಡ್ ಬುಲೆಟ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿಯಿಂದ ಯಮಹಾ ಎಫ್ಜೆಡ್ ಬೈಕ್ಗಳನ್ನು ಎಗರಿಸಿತ್ತು. ಈ ಬಗ್ಗೆ ದಕ್ಷಿಣ ಠಾಣೆಯಲ್ಲಿ 4 ಹಾಗೂ ಉಳ್ಳಾಲ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು.
ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ಮಾಹಿತಿ ಬಯಲಾಗಿದೆ. ಆರೋಪಿಗಳು ಸರಗಳ್ಳತನದಂತಹ ಇತರ ದುಷ್ಕೃತ್ಯಗಳನ್ನು ಎಸಗಲು ಹಾಗೂ ಕಳವು ಮಾಡಿದ ಬೆಲೆಬಾಳುವ ಬೈಕ್ಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಈ ಕೃತ್ಯ ಎಸಗುತ್ತಿದ್ದರು ಎಂಬುದು ತಿಳಿದುಬಂದಿದೆ. ಬಂಧಿತ 4 ಜನ ಪ್ರಮುಖ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು ಸೌತ್ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ಬೈಂದೂರ್ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಮಾರುತಿ, ನವೀನ್, ರೇಖಾ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಲತೇಶ್ ನಾಯ್ಕ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್ ಮತ್ತು ರೇಣುಕಾ ಎಮ್ ಅವರಿದ್ದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿ ಕಳ್ಳರ ಜಾಲವನ್ನು ಮಟ್ಟಹಾಕಿದೆ.




