ಕುಂದಾಪುರ: ಮಗಳನ್ನು ಕೊಲೆ ಮಾಡಿ ತಾಯಿ ಆತ್ಮಹತ್ಯೆ
ಕುಂದಾಪುರ: ಮಗಳ ಶಾರೀರಿಕ ಅಂಗವಿಕಲತೆಯಿಂದ ತೀವ್ರ ಮನನೊಂದ ತಾಯಿಯೊಬ್ಬರು 14 ವರ್ಷದ ವಿಶೇಷ ಚೇತನ ಮಗಳನ್ನು ಹತ್ಯೆ ಮಾಡಿ, ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಕೊರಗ ಕಾಲೋನಿಯಲ್ಲಿ ಭಾನುವಾರ ನಡೆದಿದೆ.
ಮೃತರನ್ನು ನೇತ್ರಾವತಿ ಹಾಗೂ ಅವರ ಮಗಳಾದ ಸುಪ್ರೀತಿ (14) ಎಂದು ಗುರುತಿಸಲಾಗಿದೆ.ವರದಿಗಳ ಪ್ರಕಾರ, ಸುಪ್ರೀತಿ ಹುಟ್ಟಿನಿಂದಲೇ ಅಂಗವಿಕಲೆಯಾಗಿದ್ದರು. ಸಂಪೂರ್ಣವಾಗಿ ಮಂಚದಲ್ಲೇ ಕಾಲ ಕಳೆಯುತ್ತಿದ್ದ ಆಕೆಗೆ ನಡೆಯಲು, ಕುಳಿತುಕೊಳ್ಳಲು ಅಥವಾ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ದಿನಗೂಲಿ ಕಾರ್ಮಿಕರಾಗಿ ಕುಟುಂಬವನ್ನು ಸಲಹುತ್ತಿದ್ದ ಆಕೆಯ ತಂದೆ ಸುಧಾಕರ್ ಕೊರಗ ಅವರು, ಕಳೆದ 14 ವರ್ಷಗಳಿಂದ ಮಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಮಗಳ ಆರೈಕೆಯನ್ನು ನಿರಂತರವಾಗಿ ಮಾಡುತ್ತಿದ್ದ ತಾಯಿ ನೇತ್ರಾವತಿ, ಆಕೆಯ ಆರೋಗ್ಯ ಸ್ಥಿತಿಯನ್ನು ಕಂಡು ತೀವ್ರ ಮನನೊಂದು ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ. ಈ ದಂಪತಿಗೆ ಓರ್ವ ಸಣ್ಣ ಗಂಡು ಮಗನೂ ಇದ್ದಾನೆ.
ಈ ಘಟನೆ ಬೆಳಗ್ಗೆ ಸುಮಾರು 8:30ರ ವೇಳೆಗೆ ಬೆಳಕಿಗೆ ಬಂದಿದೆ. ಸುಧಾಕರ್ ಕೆಲಸಕ್ಕೆ ತೆರಳಿದ ನಂತರ, ಮನೆಕೆಲಸ ಮುಗಿಸಿದ ನೇತ್ರಾವತಿ ಮಗಳ ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾರೆ. ನಂತರ ತಾವೂ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಎಸ್. ನಾಯಕ್, ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್. ಡಿ. ಕುಲಕರ್ಣಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್., ಅಪರಾಧ ವಿಭಾಗದ ಅಧಿಕಾರಿ ಮಹಾಂತೇಶ್ ಹಾಗೂ ಅಪರಾಧ ಸ್ಥಳ ಪರಿಶೀಲನಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಘಟನಾ ಸ್ಥಳಕ್ಕೆ ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ವಿ., ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಪ್ರಶಾಂತ್ ಶೆಟ್ಟಿ ಉಳ್ತೂರು, ಸುಕುಮಾರ್ ಶೆಟ್ಟಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ಘಟನೆಯ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




