ರಾತ್ರಿ ವಾಕಿಂಗ್ ತೆರಳಿದ್ದಾಗ ಕುಸಿದು ಬಿದ್ದು ಯುವತಿ ಸಾವು
ವಾಷಿಂಗ್ಟನ್: ರಾತ್ರಿ ವಾಕಿಂಗ್‌ಗೆ ತೆರಳಿದ್ದ ವೇಳೆ ಕುಸಿದುಬಿದ್ದು ತೆಲಂಗಾಣ ಮೂಲದ ಯುವತಿ ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನ ಆಲ್ಬನಿಯಲ್ಲಿ ನಡೆದಿದೆ.
ತೆಲಂಗಾಣ ಮೂಲದ ಅಕ್ಷಿತಾ (25) ಮೃತ ಯುವತಿ. ಅಕ್ಷಿತಾ ಮಾಸ್ಟರ್ ಆಫ್ ಸೈನ್ಸ್ ಪದವಿ ಪೂರ್ಣಗೊಳಿಸಿ, ಇತ್ತೀಚೆಗಷ್ಟೇ ಉದ್ಯೋಗವನ್ನೂ ಪಡೆದು ಹೊಸ ಜೀವನ ಆರಂಭಿಸಲು ಸಿದ್ಧರಾಗಿದ್ದರು. ಇದೀಗ ಅಕ್ಷಿತಾ ಅವರ ದಿಢೀರ್ ಸಾವು ಕುಟುಂಬಸ್ಥರಿಗೆ ಆಘಾತ ತಂದಿದೆ.
ತೆಲಂಗಾಣದ ಉದ್ಯಮಿ ನಲ್ಲಮಾಲ ಆನಂದ್ ಅವರ ಪುತ್ರಿ ಅಕ್ಷಿತಾ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಇತ್ತೀಚೆಗಷ್ಟೇ ತಮ್ಮ ಎಂಎಸ್ ಪದವಿಯನ್ನು ಪೂರ್ಣಗೊಳಿಸಿದ್ದರು. ಕುಟುಂಬದ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ ಊಟದ ಬಳಿಕ ಅಕ್ಷಿತಾ ತಮ್ಮ ನಿವಾಸದ ಹೊರಗೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.
ಸ್ವಲ್ಪ ಸಮಯದ ಬಳಿಕ ಹೊರಗೆ ಬಂದ ಅವರ ಸಹೋದರ ಅಕ್ಷಯ್, ಅಕ್ಷಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ನೆರೆಹೊರೆಯವರ ಸಹಾಯದಿಂದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅಕ್ಷಿತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಹೃದಯಾಘಾತದಿಂದ ಅಕ್ಷಿತ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.




