ಅಕ್ರಮ ಮೀನುಗಾರಿಕೆ: ಮಲ್ಪೆಯ 2 ಬೋಟ್ಗಳು ವಶ; 6.11 ಲಕ್ಷ ರೂ. ದಂಡ
ಕಾಸರಗೋಡು: ಕೇರಳದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆ ಮೂಲದ ಎರಡು ಮೀನುಗಾರಿಕಾ ಬೋಟ್ಗಳನ್ನು ಕೇರಳ ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿದ್ದು, ದಂಡ ಹಾಗೂ ಹರಾಜಿನ ಮೊತ್ತ ಸೇರಿ ಒಟ್ಟು 6.11 ಲಕ್ಷ ರೂ. ವಸೂಲಿ ಮಾಡಿದೆ.
ಗುರುವಾರ ರಾತ್ರಿ ಮೀನುಗಾರಿಕೆ ಇಲಾಖೆ ಹಾಗೂ ಮರೈನ್ ಎನ್ಫೋರ್ಸ್ಮೆಂಟ್ ವಿಭಾಗ ಜಂಟಿಯಾಗಿ ನಡೆಸಿದ ರಾತ್ರಿ ಗಸ್ತು ಕಾರ್ಯಾಚರಣೆಯ ವೇಳೆ ಈ ಕ್ರಮ ಕೈಗೊಳ್ಳಲಾಗಿದೆ. ಉಪ್ಪಳ ಕರಾವಳಿಯಿಂದ 12 ನಾಟಿಕಲ್ ಮೈಲಿ ವ್ಯಾಪ್ತಿಯಲ್ಲಿ ಅಗತ್ಯ ದಾಖಲೆಗಳಿಲ್ಲದೆ ರಾತ್ರಿ ವೇಳೆ ಟ್ರಾಲಿಂಗ್ ನಡೆಸುತ್ತಿದ್ದಾಗ ಈ ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕರ್ನಾಟಕ ಮೂಲದ ‘ಏಕಾಂಶ್’ ಮತ್ತು ‘ದಿಶಾ II’ ಬೋಟ್ಗಳ ಮಾಲೀಕರ ವಿರುದ್ಧ ತನಿಖಾ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಕೇರಳ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಡಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಸಿ. ಕೆ. ಶೈನಿ ಅವರು 5 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇದರೊಂದಿಗೆ ಬೋಟ್ನಲ್ಲಿದ್ದ ಮೀನುಗಳನ್ನು ಹರಾಜು ಹಾಕುವ ಮೂಲಕ ಹೆಚ್ಚುವರಿಯಾಗಿ 1.11 ಲಕ್ಷ ರೂ. ಸಂಗ್ರಹಿಸಲಾಗಿದ್ದು, ಒಟ್ಟು 6.11 ಲಕ್ಷ ರೂ. ವಸೂಲಿ ಮಾಡಲಾಗಿದೆ.
ಕುಂಬಳೆ ಮತ್ಸ್ಯ ಭವನದ ಮೀನುಗಾರಿಕಾ ವಿಸ್ತರಣಾಧಿಕಾರಿ ಕುಮಾರಿ ಅರುಣೇಂದು ರಾಮಕೃಷ್ಣನ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಮರೈನ್ ಎನ್ಫೋರ್ಸ್ಮೆಂಟ್ ವಿಭಾಗದ ಎಸ್ಸಿಪಿಒ ಶರತ್ ಕುಮಾರ್, ಸಿಪಿಒ ಅರ್ಜುನ್, ರಕ್ಷಣಾ ಸಿಬ್ಬಂದಿಗಳಾದ ಶಿವಕುಮಾರ್, ಧನೇಶ್, ಸಮೀರ್, ಅಶ್ವಾಕ್ ಅಲಿ ಮತ್ತು ಮುನೀರ್, ಬೋಟ್ ಚಾಲಕ (ಸ್ರಾಂಕ್) ಮೊಹಮ್ಮದ್ ಇಕ್ಬಾಲ್ ಹಾಗೂ ಚಾಲಕ ಸತೀಶ್ ಇದ್ದರು.
ಕಾನೂನು ಉಲ್ಲಂಘಿಸಿ ಮೀನುಗಾರಿಕೆ ನಡೆಸುವ ಬೋಟ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಟಿ.ಆರ್. ತಿಳಿಸಿದ್ದಾರೆ.




