ದುರ್ಬಲರ ಬಗ್ಗೆ ಕಾಳಜಿ ವಹಿಸುವ ಕಾರ್ಯ ನಡೆಯಬೇಕು: ಡಾ. ರಾಜಾರಾಮ್ ಕೆ.ವಿ
ವಿಟ್ಲ: ಮುಡ್ನೂರು ಗ್ರಾಮದ ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮತ್ತು ಬಿಲ್ಲವ ಮಹಿಳಾ ಘಟಕದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುರುಪೂಜೆ ಕುಂಡಡ್ಕ ಬೇರಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಧ್ಯಕ್ಷ ಡಾ. ರಾಜಾರಾಮ್ ಕೆ.ವಿ ಉದ್ಘಾಟಿಸಿ ಮಾತನಾಡಿ ನಾರಾಯಣ ಗುರುಗಳ ತತ್ವ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರ ಫಲವಾಗಿ ವಿದ್ಯಾವಂತವಾಗಿದೆ. ಸ್ವಾಭಿಮಾನದ ಜೀವನ ನಡೆಸಲಾಗುತ್ತಿದೆ. ಸಮಾಜದಲ್ಲಿರುವ ದುರ್ಬಲರ ಬಗ್ಗೆ ಕಾಳಜಿ ವಹಿಸುವ ಕಾರ್ಯ ನಡೆಯಬೇಕು. ತೊಂದರೆಯಾದಾಗ ಯಾರೂ ಸಂಘರ್ಷಕ್ಕೆ ಹೋಗಬಾರದು. ಸಾತ್ವಿಕ ಹೋರಾಟ ಮಾಡಬೇಕು. ಇದರಿಂದ ಸ್ವಾಭಿಮಾನದ ಬದುಕು ಸಾಧ್ಯವಾಗುತ್ತದೆ. ಮನೆಯಿಂದ ಪ್ರಥಮವಾಗಿ ಸೇವೆ ಪ್ರಾರಂಭ ಆಗಬೇಕು. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಸಮಾಜದ ಎಲ್ಲರಿಗೂ ಸಹಾಯ ಮಾಡುವ ಮನೋಭಾವ ಬೆಳೆಸಬೇಕು. ಇದರಿಂದ ನಮ್ಮ ಕನಸು ನನಸಾಗಿ ಸುಂದರ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ವತಿಯಿಂದ ಸಭಾಭವನದ ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಅಡ್ಯಾಲು ಲೀಲಾವತಿ ಅವರಿಗೆ ಸಹಾಯಧನ ವಿತರಿಸಲಾಯಿತು. ಯಶೋಧ ಹರೀಶ್ ಪೂಜಾರಿ ಅವರಿಂದ ಎಂಟು ಬಡ ಕುಟುಂಬಕ್ಕೆ ಅಕ್ಕಿ ಮತ್ತು ದಿನಸಿ ವಿತರಿಸಲಾಯಿತು.
ಹಿರಿಯರಾದ ಭುಜಂಗ ಪೂಜಾರಿ ನೀರಾಕೋಡಿ, ಮೋನಪ್ಪ ಪೂಜಾರಿ ಕುಕ್ಕತ್ತಡ್ಕ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ಹರೀಶ್ ಉದ್ಯಂಗಳ, ವಿಟ್ಲ ಯುವವಾಹಿನಿ ಘಟಕದ ಅಧ್ಯಕ್ಷ ಯಶವಂತ ಪೂಜಾರಿ ಪರನೀರು, ನ್ಯಾಯವಾದಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ, ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ಬೇರಿಕೆ, ಸುಮಲತಾ ಅಶೋಕ್ ಮೊದಲಾದವರು ಭಾಗವಹಿಸಿದ್ದರು.
ಕಾರ್ಯದರ್ಶಿ ಹರೀಶ ನೀರಾಕೋಡಿ ನಿರೂಪಿಸಿದರು. ಅಕ್ಷಯ್ ಕುಂದರ್ ವಂದಿಸಿದರು.




