ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಸಾವು
ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಿವೇಗರ್ ಬೀಚ್‌ನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಪುಣೆಯ ಖಾಸಗಿ ಅಕಾಡೆಮಿಯ ಎಂಟು ಮಂದಿ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಡೆದಿದೆ. ಮೃತಪಟ್ಟ ಎಲ್ಲಾ 8 ವಿದ್ಯಾರ್ಥಿಗಳ ಶವಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದ್ದು, ಅವರೆಲ್ಲರಿಗೂ 16 ವರ್ಷ ವಯಸ್ಸಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ತನ್ಮಯ್ ದತ್ತಾತ್ರೇ ವಾಹಿಲೆ, ಸುಮಿತ್ ಭರತ್ ಅಹಿರೆ,ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಾಸಂಕರ್, ರಾಜವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಂ ತುಕಾರಾಂ ಭಂಡ್ವಾಲ್ಕರ್, ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ.
ಪುಣೆ ಜಿಲ್ಲೆಯ ಆಳಂದಿಯಲ್ಲಿರುವ ‘ವಿನ್ನರ್ಸ್ ಅಕಾಡೆಮಿ’ ಎಂಬ ಖಾಸಗಿ ತರಬೇತಿ ಕೇಂದ್ರದಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ದಿವೇಗರ್ ಬೀಚ್‌ಗೆ ಶೈಕ್ಷಣಿಕ ಪ್ರವಾಸಕ್ಕಾಗಿ ವಿದ್ಯಾರ್ಥಿಗಳು ಆಗಮಿಸಿದ್ದರು. 25 ಹುಡುಗರು, 17 ಹುಡುಗಿಯರು ಹಾಗೂ 6 ಶಿಕ್ಷಕರು ಸೇರಿದಂತೆ ಒಟ್ಟು 48 ಜನರ ತಂಡ ಸಂಜೆ 5:30 ರ ಸುಮಾರಿಗೆ ಬೀಚ್‌ಗೆ ತೆರಳಿತ್ತು. ಈ ವೇಳೆ ಎಂಟು ವಿದ್ಯಾರ್ಥಿಗಳು ನೀರಿಗಿಳಿದಿದ್ದು, ಸಮುದ್ರದ ಆಳ ಹಾಗೂ ನೀರಿನ ಪ್ರವಾಹದ ತೀವ್ರತೆಯನ್ನು ಅಂದಾಜಿಸಲು ಸಾಧ್ಯವಾಗದೇ ಭಾರಿ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದಾರೆ.




