October 2, 2026

ಸೌಜನ್ಯಾ ಪ್ರಕರಣ ಮರುತನಿಖೆ: ಮಂಗಳೂರಿಗೆ ಆಗಮಿಸಿದ ಎಸ್‌ಐಟಿ ತಂಡ, ತನಿಖೆ ಆರಂಭ

0
image_editor_output_image-555798601-1790882953950

ಮಂಗಳೂರು: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ 2012ರ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ (SIT) ಅಧಿಕೃತವಾಗಿ ತನ್ನ ಕಾರ್ಯಚಟುವಟಿಕೆಯನ್ನು ಮಂಗಳೂರಿನಲ್ಲಿ ಆರಂಭಿಸಿದೆ. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ರಂದು ನೀಡಿದ ಐತಿಹಾಸಿಕ ಆದೇಶದನ್ವಯ ರಚನೆಯಾಗಿರುವ ಹೊಸ ಎಸ್‌ಐಟಿ, ಮೂರು ತಿಂಗಳ ಅವಧಿಯೊಳಗೆ ತನಿಖೆಯನ್ನು ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.

ಎಸ್‌ಐಟಿ ಸದಸ್ಯರಾದ ಗುಪ್ತಚರ ವಿಭಾಗದ ಎಸ್‌ಪಿ ನಿಶಾ ಜೇಮ್ಸ್ ಹಾಗೂ ಸಿಐಡಿ ಎಸ್‌ಪಿ ಲೋಕೇಶ್ ಜಗಲ್ಸಾರ್ ಗುರುವಾರ ಮಂಗಳೂರಿಗೆ ಆಗಮಿಸಿದ್ದಾರೆ. ಇಬ್ಬರೂ ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ತನಿಖೆಯ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ. ತನಿಖಾ ತಂಡದ ಸುಸೂತ್ರ ಕಾರ್ಯಾಚರಣೆಗೆ ಮಂಗಳೂರು ಮತ್ತು ಬೆಳ್ತಂಗಡಿಯಲ್ಲಿ ಎರಡು ಪ್ರತ್ಯೇಕ ಕಚೇರಿಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ. ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಎಸ್‌ಐಟಿ ಕೇಂದ್ರ ಕಚೇರಿಯಾಗಿ ಬಳಸಿಕೊಳ್ಳಲು ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು ಸಿಐಡಿ ಎಸ್‌ಪಿ ಲೋಕೇಶ್ ಜಗಲ್ಸಾರ್ ಅವರನ್ನು ಈ ಪ್ರಕರಣದ ಮುಖ್ಯ ತನಿಖಾಧಿಕಾರಿಯನ್ನಾಗಿ  ನೇಮಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 24ರಂದು ಕರ್ನಾಟಕ ಸರ್ಕಾರವು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ ಎಸ್‌ಐಟಿ ತಂಡವನ್ನು ರಚಿಸಿತ್ತು. ಈ ತಂಡದಲ್ಲಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್‌ಪಿ ನಿಶಾ ಜೇಮ್ಸ್, ಎಸ್‌ಪಿ ಲೋಕೇಶ್ ಜಗಲ್ಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಸೇರಿದ್ದರು. ಆದರೆ, ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರ ಸೇರ್ಪಡೆಗೆ ಸೌಜನ್ಯಾ ಕುಟುಂಬಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ತಮ್ಮನ್ನು ಎಸ್‌ಐಟಿಯಿಂದ ಬಿಡುಗಡೆ ಮಾಡುವಂತೆ ವೆಂಕಟೇಶ್ ಪ್ರಸನ್ನ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

 

Leave a Reply

Your email address will not be published. Required fields are marked *

error: Content is protected !!