MRPL ಭೀಕರ ಸ್ಫೋಟ ಪ್ರಕರಣ: 54 ಮನೆಗಳು, ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಹಾನಿ
ಮಂಗಳೂರು: ಸ್ಪೋಟದ ಕಂಪನಕ್ಕೆ ಬಾಳ ಗ್ರಾಮದ 10, ಕಳವಾರು ಗ್ರಾಮದ 19 ಮತ್ತು ತೋಕೂರು ಗ್ರಾಮದ 25 ಮನೆಗಳ ಸಹಿತ ಒಟ್ಟು 54 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ದೇವಸ್ಥಾನ, ಚರ್ಚ್, ಮಸೀದಿ ಸಹಿತ ಒಟ್ಟು 8 ಧಾರ್ಮಿಕ ಕೇಂದ್ರಗಳಿಗೆ ಹಾನಿಯಾಗಿದೆ ಎಂದು ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.
ಕಳವಾರು ಬೆಂಕಿನಾಥೇಶ್ವರ ದೇಗುಲ ಭವನ, ಸೈಂಟ್ ಜೋಸೆಫ್ ಚರ್ಚ್, ಜೋಕಟ್ಟೆಯ ಮೊಹಿಯುದ್ದೀನ್ ಹಳೆ ಜುಮಾ ಮಸೀದಿ, ಈದ್ದಾ ಮಸೀದಿ, ಕಳವಾರು ಮಸೀದಿ ಮತ್ತು ಜೋಕಟ್ಟೆ ಅಂಜುಮಾನ್ ಶಾಲೆಗೆ ಹಾನಿಯಾಗಿದೆ.
ದೇವಸ್ಥಾನದ ಪಕ್ಕದ ಸಭಾ ಭವನದ ಕಿಟಕಿ ಗಾಜುಗಳು ಪುಡಿಯಾಗಿವೆ. ಗುತ್ತಿನ ಮನೆಯ ಗೋಡೆಯಲ್ಲಿ ಬಿರುಕು ಮೂಡಿದೆ. ಕಳವಾರು ಸೈಂಟ್ ಜೋಸೆಫ್ ಚರ್ಚ್‌ನ ಹೆಂಚುಗಳು ಹಾರಿ ಬಿದ್ದಿವೆ. ಪಕ್ಕದ ಧರ್ಮಗುರುಗಳ ನಿವಾಸದ ಹೆಂಚುಗಳೂ ಬಿದ್ದಿವೆ. ಜೋಕಟ್ಟೆ ನಡುಮನೆಯ ರಜಾಕ್ ಅವರ ಪುತ್ರಿ ಕಂಪನದಿಂದಾಗಿ ಮಂಚದಿಂದ ಕೆಳಗೆ ಬಿದ್ದ ಪರಿಣಾಮ ಕೈಗೆ ಗಾಯವಾಗಿದೆ. ಜೋಕಟ್ಟೆ ಹರಿಕೆರೆಯ ಅಬ್ದುಲ್ ರಹಿಮಾನ್ ಅವರ ಮನೆಯ ಕಿಟಕಿಯ ಗಾಜು ಪುಡಿಯಾಗಿದೆ. ಇದೇ ಪರಿಸರದ ಹಲವು ಮನೆಗಳಿಗೆ ಹಾನಿಯಾಗಿದೆ.




