ಮಾಡೆಲಿಂಗ್ಗಾಗಿ ತನ್ನಿಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ತಾಯಿ
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಳಿಂಜಂಪರ ಬಳಿ ಬಾತ್‌ರೂಮ್‌ನ ಸ್ನಾನದ ತೊಟ್ಟಿಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನಪ್ಪಿದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಇದೊಂದು ಭೀಕರ ಕೊಲೆ ಎಂದು ಪೊಲೀಸರು ಘೋಷಿಸಿದ್ದಾರೆ.
ಸ್ವತಂತ್ರ ಜೀವನ ಹಾಗೂ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡಲು ಮಕ್ಕಳು ಅಡ್ಡಿಯಾಗಿದ್ದರೆಂದು ತಾಯಿ ನಿವೇದ್ಯಾ ತನ್ನಿಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿರುವುದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾಳೆ.
ಈ ಕೃತ್ಯದಲ್ಲಿ ಐದು ವರ್ಷದ ಜೆನ್ನಿಫರ್ ಜೂಲಿಯೆಟ್ ಹಾಗೂ ಮೂರು ವರ್ಷದ ರಾಬಿನ್ ಕ್ರಿಸ್ಟೋಫರ್ ಎಂಬ ಮುಗ್ಧ ಮಕ್ಕಳು ಮೃತಪಟ್ಟಿದ್ದಾರೆ.
ವಡಕರಪತಿಯ ಮನಲ್ಕಾಡು ಪಝನಿಯಾರ್ಪಾಳಯಂ ನಿವಾಸಿ, ಮರ ಕಡಿಯುವ ಕೆಲಸ ಮಾಡುವ ಜಾನ್‌ಕುಮಾರ್ ಮತ್ತು ನಿವೇದ್ಯಾ ದಂಪತಿ ಎರಡು ತಿಂಗಳ ಹಿಂದಷ್ಟೇ ಮೆನನ್‌ಪಾರಾದ ಕೂರಂಗಡುವಿನ ಬಾಡಿಗೆ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು.
ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಜಾನ್‌ಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ, ಮನೆಯಲ್ಲಿ ನಿವೇದ್ಯಾ ಹಾಗೂ ಇಬ್ಬರು ಮಕ್ಕಳು ಮಾತ್ರವೇ ಇದ್ದರು.
ಆರಂಭದಲ್ಲಿ ನಾಟಕವಾಡಿದ್ದ ನಿವೇದ್ಯಾ, ಮಕ್ಕಳು ಕಾಣೆಯಾಗಿದ್ದಾರೆಂದು ನೆರೆಹೊರೆಯವರ ಬಳಿ ಹೇಳಿಕೊಂಡಿದ್ದಳು. ಬಳಿಕ ಹಿತ್ತಲಿನಲ್ಲಿರುವ ಸ್ನಾನಗೃಹದ ಬಾತ್‌ಟಬ್‌ನಲ್ಲಿ ಮಕ್ಕಳಿಬ್ಬರೂ ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಕಿರುಚಾಡಿದ್ದಳು. ಸ್ಥಳೀಯರು ತಕ್ಷಣವೇ ಮಕ್ಕಳನ್ನು ನಟ್ಟುಕಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಮಕ್ಕಳು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.





