ವಿಟ್ಲ: ಗ್ರಾಮೀಣ ಸಹಕಾರಿ ಸಂಘದ ಮಹಾಸಭೆ: 4 ಕೋಟಿಗೂ ಅಧಿಕ ಲಾಭ-ಸದಸ್ಯರಿಗೆ ಶೇ. 22 ಡಿವಿಡೆಂಡ್ ಘೋಷಣೆ
ವಿಟ್ಲ ಗ್ರಾಮೀಣ ಸಹಕಾರಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ
1087.99 ಕೋಟಿ ರೂ.ವ್ಯವಹಾರ ನಡೆಸಿ 4,04,48,775.71 ರೂ. ಲಾಭ ಗಳಿಸಿದೆ. ಸದಸ್ಯರಿಗೆ 22%ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್
ತಿಳಿಸಿದರು.
ಅವರು ಗುರುವಾರ ವಿಟ್ಲದ ಅಕ್ಷಯ ಸಭಾಭವನದಲ್ಲಿ ನಡೆದ ಸಂಘದ 71ನೇಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮ ಹೊರತು ಉಳಿದೆಲ್ಲ ತಾಲೂಕುಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದ್ದು ವಿಟ್ಲದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕನ್ಯಾನ ,ಕಲ್ಲಡ್ಕ, ಬಿ. ಸಿ. ರೋಡ್ ಮತ್ತು ಪುತ್ತೂರಿನಲ್ಲಿ ಶಾಖೆಗಳಿದ್ದು, 9189 ಸದಸ್ಯರಿದ್ದಾರೆ. 3.04ಕೋಟಿ ರೂ. ಪಾಲು ಬಂಡವಾಳ ಇದ್ದು, ಕಳೆದ ಸಾಲಿನ ವ್ಯವಹಾರಕ್ಕಿಂತ ಈ ಸಾಲಿನಲ್ಲಿ 226 ಕೋಟಿ ರೂ. ಹೆಚ್ಚು ವ್ಯವಹಾರ ನಡೆಸಿ ದಾಖಲೆ ಮಾಡಿದೆ ಎಂದರು.
95.11% ಸಾಲ ವಸೂಲಾತಿ
ಆಧುನಿಕ ಬ್ಯಾಂಕಿಂಗ್ ಯುಗದಲ್ಲಿ ಪೈಪೋಟಿಯ ಮಧ್ಯೆಯೂ 149.84ಕೋಟಿ ರೂ. ಠೇವಣಿ ಸಂಗ್ರಹ ಮಾಡಿದ್ದು, ಕಳೆದ ಸಾಲಿಗಿಂತ 11.22ಶೇಕಡಾ ಅಧಿಕವಾಗಿದೆ. ಹೊರಬಾಕಿ ಸಾಲ 125.63ಕೋಟಿ ರೂ.ಸಾಲ ವಸೂಲಾತಿ ಶೇಕಡಾ 95.11 ಆಗಿದ್ದು ಇದು ಕೂಡ ಕಳೆದ ಸಾಲಿಗಿಂತ ಹೆಚ್ಚು ದಾಖಲಾಗಿದೆ.ಪ್ರಸ್ತುತ ಸಂಘದಲ್ಲಿ 9.96ಕೋಟಿ ರೂ. ಮೀಸಲು ನಿಧಿ ಹಾಗೂ13.65ಕೋಟಿ ರೂ. ಗಳ ಇತರ ನಿಧಿಗಳಿವೆ.4.43 ಕೋಟಿ ರೂ.ಗಳ ಚರ ಮತ್ತು ಸ್ಥಿರಾಸ್ತಿಗಳಿವೆ ಸಂಘದ ದುಡಿಯುವ ಬಂಡವಾಳ 180.55 ಕೋಟಿ ರೂ.ಗಳಾಗಿವೆ.ಸಂಘವು ಹಲವು ವರ್ಷಗಳಿಂದ ಅಡಿಟ್ ವರ್ಗೀಕರಣದಲ್ಲಿ ಎ ತರಗತಿಯಲ್ಲಿ ಇದ್ದು ಕಳೆದ ಸಾಲಿನಲ್ಲಿ ಶೇಕಡಾ 22 ಡಿವಿಡೆಂಡ್ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
160 ಕೋಟಿ ರೂ. ಠೇವಣಿ ಸಂಗ್ರಹಣೆ ಗುರಿ
ಸಂಘವು 2026-27ನೇ ಸಾಲಿನಲ್ಲಿ 160 ಕೋಟಿ ರೂ. ಅಧಿಕ ಠೇವಣಿ ಸಂಗ್ರಹಣೆ, 135 ಕೋಟಿ ರೂ. ಗೂ ಮೀರಿ ಸಾಲ ನೀಡಿಕೆ,4.45ಕೋಟಿ ರೂ. ಗೂ ಹೆಚ್ಚಿನ ಲಾಭ ಹಾಗೂ 96 ಶೇಕಡಾ ಸಾಲ ವಸೂಲಾತಿ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅಧ್ಯಕ್ಷರು ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಂಘವು ಸತತ ಐದು ಬಾರಿ ಸಾಧನಾ ಪ್ರಶಸ್ತಿಯನ್ನು ಪಡೆದಿದೆ ಎಂದರು.
ಸಂಘದ ಉಪಾಧ್ಯಕ್ಷ ಮನೋರಂಜನ್ ಕೆ. ಆರ್.
ನಿರ್ದೇಶಕರಾದ ಜಯಂತಿ ಎಚ್. ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ.,ಪೂವಪ್ಪ ಎಸ್., ದಿವಾಕರ ವಿ., ಕೇಶವ ಎ., ಗೋವರ್ಧನ ಕುಮಾರ್ ಐ., ಭಾಸ್ಕರ್ ಶೆಟ್ಟಿ, ರಾಮದಾಸ ಶೆಣೈ, ಮೋಹನ ಕೆ. ಎಸ್., ವಿಶ್ವನಾಥ ಎಂ., ತಿರುಮಲೇಶ್ವರ ಭಟ್ ಪಿ.ಹಾಗೂ ಸತೀಶ್ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು
ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ಸ್ವಾಗತಿಸಿದರು. ಸಿಬ್ಬಂದಿ
ಕೆ. ಶ್ರೀನಿಧಿ ವಿ. ಕುಡ್ವ ಪ್ರಾರ್ಥನೆ ಹಾಡಿದರು.
ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ವಾರ್ಷಿಕ ವರದಿ ಓದಿ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷ ಮನೋರಂಜನ್ ಕೆ ಆರ್. ವಂದಿಸಿದರು. ಸಿಬ್ಬಂದಿ
ಮಹೇಶ್ ಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು





