August 20, 2026

ಮುದರಂಗಡಿ ಉದ್ಯಮಿ ಡೇವಿಡ್‌ ಡಿಸೋಜಾ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

0
IMG-20260820-WA0038

ಉಡುಪಿ: ಕಾಪು ತಾಲೂಕಿನ ಮುದರಂಗಡಿ ಜಂಕ್ಷನ್‌ನಲ್ಲಿ ಆ.7ರ ಸಂಜೆ ನಡೆದ ಉದ್ಯಮಿ ಡೇವಿಡ್‌ ಡಿಸೋಜಾ ಕೊಲೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯ ಬಂಧನವಾಗಿದೆ. ಇತರ ಆರೋಪಿಗಳೊಂದಿಗೆ ಸೇರಿ ಸಂಚು ನಡೆಸಿ ಕೃತ್ಯಕ್ಕೆ ಹಣಕಾಸು ಪೂರೈಕೆ ಮಾಡಿದ್ದ ಆರೋಪಿಯೊಬ್ಬನನ್ನು ಉತ್ತರಾಖಂಡ ರಾಜ್ಯದಲ್ಲಿ ಬಂಧಿಸಲಾಗಿದೆ.

ಬಂಧಿತನನ್ನು ಬಿಹಾರ ರಾಜ್ಯದ ಶೇಖ್‌ಪುರದ ಸೂರಜ್‌ ಕುಮಾರ್‌ (31) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿದ್ದ ಈತನನ್ನು ಉತ್ತರಾಖಂಡದ ನೈನಿತಾಲ್‌ ನಲ್ಲಿ ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳ ಸಂಖ್ಯೆ 8ಕ್ಕೇರಿದೆ.

ಆ.7ರ ಸಂಜೆ 3.45ರ ಸುಮಾರಿಗೆ ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್‌ ಕಾಂಪ್ಲೆಕ್ಸ್‌ ನಲ್ಲಿ ಪ್ರಿನ್ಸ್ ಎಂಟರ್ಪ್ರೈಸಸ್ ನ ಮಾಲಕ ಡೇವಿಡ್ ಡಿಸೋಜಾ ಎಂಬವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ರಾಜು, ಅನ್ಮೋಲ್ ರಸ್ತೋಗಿ, ಜಿಯಾಹುಲ್ ವಾಜುಲ್ ಶೇಖ್ ಎಂಬವರನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ರಾಜು ಎಂಬಾತನ ಬಂಧನದ ವೇಳೆ ಆತನ ಕಾಲಿಗೆ ಪೊಲೀಸರು ಗುಂಡೇಟು ಇಳಿಸಿದ್ದರು. ಗಾಯಗೊಂಡಿದ್ದ ಆತನಿಗೆ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ಪ್ರಕರಣದಲ್ಲಿ ಇತರ ಆರೋಪಿಗಳೊಂದಿಗೆ ಸೇರಿ ಅಪರಾಧಿಕ ಒಳಸಂಚು ನಡೆಸಿ, ಹಣಕಾಸು ಪೂರೈಕೆ ಮಾಡಿದ ಮೊಹಮ್ಮದ್‌ ಇರ್ಷಾದ್‌ ,ಚಿರಾಗ್‌ ಪೂಜಾರಿ, ಸದಾನಂದ ದೇವಾಡಿಗ ಮತ್ತು ಕಿಶೋರ್ ರಾಮ ಪೂಜಾರಿ ಎಂಬವರನ್ನು ಬಳಿಕ ಬಂಧಿಸಲಾಗಿದೆ.

ಇದೀಗ ಮತ್ತೋರ್ವ ಆರೋಪಿ ಸೂರಜ್‌ ಕುಮಾರ್‌ ಎಂಬಾತನನ್ನು ಬಂಧಿಸಲಾಗಿದ್ದು, ಈತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್‌ ಫೋನ್‌ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಕೋರ್ಟ್‌ ಗೆ ಹಾಜರು ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!