August 20, 2026

ವಿಟ್ಲದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆ​

0
image_editor_output_image-1765702280-1787232142480

ವಿಟ್ಲ: ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮ ಜಯಂತಿ ಕಾರ್ಯಕ್ರಮವು ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, “ರಾಜೀವ್ ಗಾಂಧಿಯವರು ತಂತ್ರಜ್ಞಾನ ಕ್ರಾಂತಿಯ ಮೂಲಕ ಭಾರತವನ್ನು 21ನೇ ಶತಮಾನಕ್ಕೆ ಮುನ್ನಡೆಸಿದ ದೂರದೃಷ್ಟಿಯ ನಾಯಕರಾಗಿದ್ದರು. ಅದೇ ರೀತಿ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆಯ ಮೂಲಕ ಶೋಷಿತರಿಗೆ ಭೂಮಿಯ ಹಕ್ಕು ನೀಡಿ ಅವರ ಬದುಕಿಗೆ ಭದ್ರತೆ ಕಲ್ಪಿಸಿದ ಕ್ರಾಂತಿಕಾರಿ ಮುತ್ಸದ್ದಿ ಡಿ. ದೇವರಾಜ ಅರಸು” ಎಂದು ಇಬ್ಬರೂ ನಾಯಕರ ಕೊಡುಗೆಗಳನ್ನು ಸ್ಮರಿಸಿದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಮುಹಮ್ಮದ್ ಮಾತನಾಡಿ, “ಮತದಾನದ ವಯಸ್ಸನ್ನು 18ಕ್ಕೆ ಇಳಿಸಿ ಯುವಶಕ್ತಿಗೆ ಬಲ ತುಂಬಿದ ಹಾಗೂ ಪಂಚಾಯತ್ ರಾಜ್ ಮೂಲಕ ಗ್ರಾಮೀಣ ಭಾರತಕ್ಕೆ ಅಧಿಕಾರ ವಿಕೇಂದ್ರೀಕರಣ ಮಾಡಿದ ಕೀರ್ತಿ ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ. ಇತ್ತ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹಾಗೂ ಶಿಕ್ಷಣದ ಹಕ್ಕು ಕೊಡಿಸಿ ಸಾಮಾಜಿಕ ನ್ಯಾಯದ ಹರಿಕಾರರಾದರು” ಎಂದರು.


ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ್ ವಿಟ್ಲ ಮಾತನಾಡಿ, “ದೇಶವನ್ನು ತಾಂತ್ರಿಕವಾಗಿ ಸದೃಢಗೊಳಿಸಿದ ರಾಜೀವ್ ಗಾಂಧಿ ಹಾಗೂ ಭೂಸುಧಾರಣೆ ಮೂಲಕ ತಳಸಮುದಾಯಗಳನ್ನು ಸಬಲೀಕರಣಗೊಳಿಸಿದ ದೇವರಾಜ ಅರಸು ಅವರ ತ್ಯಾಗ ಮತ್ತು ಜನಪರ ಆದರ್ಶಗಳ ಹಾದಿಯಲ್ಲಿ ಸಾಗುವುದೇ ನಾವು ಅವರಿಗೆ ಸಲ್ಲಿಸುವ ಗೌರವ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಉಪಾಧ್ಯಕ್ಷ ದಿನಕರ ಆಳ್ವ,ಬ್ಲಾಕ್ ಕೋಶಾಧಿಕಾರಿ ಸುಧಾಕರ ಪೂಜಾರಿ ಕೇಪು, ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ಕೇಶವ ನಾಯ್ಕ, ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿಕೆಯಂ ಹಂಝ, ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ವಿಟ್ಲ ಸರ್ಕಾರಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪದ್ಮಿನಿ, ಸುನಿತಾ ಕೋಟ್ಯಾನ್, ವಿ. ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಕೇಪು ವಲಯ ಅಧ್ಯಕ್ಷ ಕೋಟಿ ಪೂಜಾರಿ, ಗ್ಯಾರಂಟಿ ಸಮಿತಿ ಸದಸ್ಯ ಅಬ್ಬು ನವಗ್ರಾಮ ಹಾಗೂ ಮುಖಂಡರಾದ ಸದಾಶಿವ ಶೆಟ್ಟಿ ಅಳಿಕೆ, ಅಶೋಕ್ ಡಿಸೋಜ, ಚಂದ್ರಹಾಸ ಶೆಟ್ಟಿ, ಉಮೇಶ್, ವಹೀದ್ ಬಿ., ಶಂಶೀರ್ ನೆಲ್ಲಿಗುಡ್ಡೆ, ಆನಂದ ಅರ್ಕ, ಮಹಮ್ಮದ್ ಅನ್ಸಾರ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!