ಆಂದ್ರಪ್ರದೇಶ: ಲಿಫ್ಟ್ ನ ಬಾಗಿಲು ಮುಚ್ಚುವ ಮುನ್ನವೇ ದಿಢೀರ್ ಕೆಳಕ್ಕೆ ಚಲಿಸಿದ ಲಿಫ್ಟ್: ಮಹಿಳೆ ದಾರುಣ ಸಾವು
ಆಂದ್ರಪ್ರದೇಶ: ಪ್ರಕಾಶಂ ಜಿಲ್ಲೆಯ ಒಂಗೋಲು ನಗರದ ವಸತಿ ಸಮುಚ್ಛಯವೊಂದರಲ್ಲಿ ಲಿಫ್ಟ್ ಬಾಗಿಲು ಮುಚ್ಚುವ ಮುನ್ನವೇ ದಿಢೀರ್ ಕೆಳಕ್ಕೆ ಚಲಿಸಿದ ಪರಿಣಾಮ, 50 ವರ್ಷದ ವನಿತಾ ಎಂಬ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ.
ವನಿತಾ ಅವರು ತಮ್ಮ ಮಗಳು ಹಾಗೂ ಮೊಮ್ಮಗನೊಂದಿಗೆ ಅಪಾರ್ಟ್‌ಮೆಂಟ್‌ನ ಲಿಫ್ಟ್‌ನಲ್ಲಿ ತೆರಳುತ್ತಿದ್ದರು. ನಿಗದಿತ ಫ್ಲೋರ್ ತಲುಪಿದ ತಕ್ಷಣ ಮಗಳು ಮತ್ತು ಮೊಮ್ಮಗ ಹೊರಗೆ ಹೆಜ್ಜೆ ಇಟ್ಟಿದ್ದಾರೆ. ವನಿತಾ ಅವರು ಹೊರಬರಲು ಯತ್ನಿಸುತ್ತಿದ್ದಂತೆಯೇ, ಲಿಫ್ಟ್ ಬಾಗಿಲು ತೆರೆದಿದ್ದರೂ ಸಹ ಇದ್ದಕ್ಕಿದ್ದಂತೆ ಕೆಳಮುಖವಾಗಿ ಚಲಿಸಲು ಪ್ರಾರಂಭಿಸಿದೆ.
ಹೊರಬರಲು ಯತ್ನಿಸಿದಾಗ ಅವರು ಚಲಿಸುತ್ತಿದ್ದ ಲಿಫ್ಟ್ ಮತ್ತು ನೆಲದ ನಡುವೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳು ಅವರನ್ನು ರಕ್ಷಿಸಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ತಾಂತ್ರಿಕ ಲೋಪ ಅಥವಾ ನಿರ್ವಹಣೆಯ ಕೊರತೆ ಕಾರಣವೇ ಎಂಬ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಅಪಘಾತವು ಬಹುಮಹಡಿ ಕಟ್ಟಡಗಳಲ್ಲಿನ ಲಿಫ್ಟ್‌ಗಳ ಸುರಕ್ಷತೆ ಮತ್ತು ನಿರ್ವಹಣೆ ಕುರಿತು ಆತಂಕ ಮೂಡಿಸಿದೆ.





