August 3, 2026

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆ

0
IMG-20260803-WA0021

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಸಹ-ಆರೋಪಿ ವಿನೋದ್ ತೋಮರ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ನಿರ್ದೋಷಿ ಎಂದು ತೀರ್ಪು ನೀಡಿ ಖುಲಾಸೆಗೊಳಿಸಿದೆ.

ದೆಹಲಿಯ ರೌಸ್ ಅವೆನ್ಯೂ ಕೋರ್ಟ್‌ನ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರ ಪೀಠವು ಸುದೀರ್ಘ ವಿಚಾರಣೆ ಮತ್ತು ವಾದ-ಪ್ರತಿವಾದ ಆಲಿಸಿದ ನಂತರ ಈ ತೀರ್ಪು ನೀಡಿದೆ.

ಭಾರತೀಯ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೇಶದ ಪ್ರಮುಖ ಮಹಿಳಾ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು, ಸಮಗ್ರ ತನಿಖೆ ನಡೆಸಿ ಜೂನ್ 15, 2023 ರಂದು 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಮಹಿಳಾ ಕುಸ್ತಿಪಟುಗಳು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿಚಾರಣೆ ಎದುರಿಸುತ್ತಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ACJM) ಅಶ್ವಿನಿ ಪನ್ವಾರ್ ಅವರ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

ಇನ್ನು ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್, “ನನ್ನ ವಿರುದ್ಧ ಆರೋಪ ಕೇಳಿಬಂದ ದಿನವೇ ನಾನು ಆರೋಪ ಸಾಬೀತಾದರೆ ನೇಣಿಗೆ ಏರಲು ಸಿದ್ಧ ಎಂದು ಹೇಳಿದ್ದೆ. ಆದರೆ ಇಂದು ನ್ಯಾಯಾಲಯ ನನ್ನನ್ನು ಖುಲಾಸೆಗೊಳಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!