ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ: ಬಳಿಕ ಮಾಜಿ ಪ್ರಿಯಕರ ಆತ್ಮಹತ್ಯೆ
ಲಕ್ನೋ: ವಿದ್ಯಾರ್ಥಿಗಳ ಮುಂದೆಯೇ ಮಾಜಿ ಪ್ರಿಯಕರ ಶಿಕ್ಷಕಿಗೆ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ.
ಸೋಮವಾರ (ಸೆ.21) ಲಖಿಂಪುರ ಖೇರಿಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸಾದರ್ ಕೊತ್ವಾಲಿಯ ಹಿದಾಯತ್ ನಗರ ನಿವಾಸಿ ನಿಶಾತ್ ಫಾತಿಮಾ (26) ಹಾಗೂ ಆರೋಪಿಯನ್ನು ಮೊಹಮ್ಮದ್ ಸೌದ್ (28) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಫಾತಿಮಾ ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆರೋಪಿ ಮೃತಳ ಮಾಜಿ ಪ್ರಿಯಕರ ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನ ಬೆಳಿಗ್ಗೆ ಸುಮಾರು 11:30ಕ್ಕೆ ಆರೋಪಿ ಶಿಕ್ಷಕಿ ನಿಶಾತ್ ಫಾತಿಮಾ ಅವರನ್ನು ಭೇಟಿಯಾಗಲು ಶಾಲೆಗೆ ಬಂದಿದ್ದ. ಬಳಿಕ ಶಾಲೆಯ ಕೋಣೆಯೊಂದಕ್ಕೆ ತೆರಳಿ ನಿಶಾತ್‌ಳ ಕೈಹಿಡಿದು ಮೇಲ್ಮಹಡಿಗೆ ಕರೆದುಕೊಂಡು ಹೋಗಿ ಮಾತನಾಡುತ್ತಿದ್ದ. ಇಬ್ಬರು ಪರಸ್ಪರ ಮಾತನಾಡುತ್ತಿದ್ದ ವೇಳೆ ಏಕಾಏಕಿ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು, ಅಲ್ಲಿದ್ದ ವಿದ್ಯಾರ್ಥಿಗಳ ಮುಂದೆಯೇ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಆನಂತರ ಬಂಧನಭೀತಿಯಲ್ಲಿ ಅದೇ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಖೇರಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಗರ್ಗ್ ಅವರು ತಿಳಿಸಿದ್ದಾರೆ.




