July 21, 2026

ನವದೆಹಲಿ: ಪ್ರಧಾನಿ ಮನೆಮುಂದೆ ಪ್ರತಿಭಟನೆ; ರಾಹುಲ್ ಗಾಂಧಿ ಸಹಿತ ಹಲವರ ಬಂಧನ

0
image_editor_output_image-1513077803-1784648696536

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ಸೋಮವಾರ ನಡೆಸಲಾದ ಯುವ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ನಡೆಯುತ್ತಿದ್ದ ವಿರೋಧ ಪಕ್ಷಗಳ ಬೃಹತ್ ಧರಣಿ ಸತ್ಯಾಗ್ರಹ ಉಗ್ರಸ್ವರೂಪ ಪಡೆಯುವ ಮುನ್ನವೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ರಾತ್ರಿಯಿಡೀ ಪ್ರಧಾನಿ ನಿವಾಸದ ಹೊರಗೆ ಧರಣಿ ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಆದರೆ, ಇಂದು ಸಂಜೆ ಸುಮಾರು 6.40ರ ವೇಳೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ಜೊತೆ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸರು ಪ್ರತಿಭಟನಾನಿರತರನ್ನು ತೆರವುಗೊಳಿಸಲು ಆರಂಭಿಸಿದರು. ಆದರೆ ರಾಹುಲ್ ಗಾಂಧಿ ತಮ್ಮ ಬೇಡಿಕೆಗಳು ಈಡೇರುವವರೆಗೆ ಆ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತಿದ್ದರು.

ಪೊಲೀಸರ ಸೂಚನೆ ಹೊರತಾಗಿಯೂ ಪ್ರತಿಭಟನೆ ಹಿಂಪಡೆಯಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಈ ಹಿನ್ನೆಲೆ ಅವರನ್ನು 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸುತ್ತುವರಿದು ಬಲವಂತವಾಗಿ ಸ್ಥಳದಿಂದ ಎಬ್ಬಿಸಿ, ಹೊತ್ತುಕೊಂಡೇ ಬಸ್‌ನಲ್ಲಿ ಹತ್ತಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ.

ಇನ್ನು ಪೊಲೀಸರು ರಾಹುಲ್ ಗಾಂಧಿ ಅವರ ಕೈ-ಕಾಲು ಹಿಡಿದು, ಕರೆದೊಯ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಪೋಲಿಸರ ಈ ಕ್ರಮವನ್ನು ಕಾಂಗ್ರೆಸ್ ಹಾಗೂ ‘ಇಂಡಿಯಾ’ ಕೂಟದ ನಾಯಕರು ತೀವ್ರವಾಗಿ ಖಂಡಿಸಿದ್ದು, ‘ಸರ್ಕಾರವು ಯುವಜನರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳನ್ನು ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!