ಪತ್ನಿಯ ತಲೆ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪತಿ: ಪೊಲೀಸ್ ವಾಹನದಿಂದ ಜಿಗಿದು ಸಾವು
ಗುವಾಹಟಿ ಸೆಪ್ಟೆಂಬರ್ 14: ತನ್ನ ಸ್ವಂತ ಪತ್ನಿಯ ಶಿರಚ್ಛೇದನ ಮಾಡಿ ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣದ ಆರೋಪಿ ರಾಮಾನುಜ್ ಗೋಸ್ವಾಮಿ, ಸೋಮವಾರ ಬೆಳಗಿನ ಜಾವ ನಗರದ ನರಕಾಸುರ ಬೆಟ್ಟದ ಬಳಿ ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಜಿಗಿದು ದುರಂತವಾಗಿ ಸಾವನ್ನಪ್ಪಿದ್ದಾನೆ. ವಾಹನದಿಂದ ಜಿಗಿದ ಪರಿಣಾಮ ಆರೋಪಿಯ ತಲೆಗೆ ತೀವ್ರ ಗಾಯಗಳಾಗಿ ಆತ ಸ್ಥಳದಲ್ಲೇ ಅಸುನೀಗಿದ್ದಾನೆ ಎಂದು ಗುವಾಹಟಿ ಪೊಲೀಸ್ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 3 ರಂದು ನಡೆದಿದ್ದ ಈ ಭೀಕರ ಕೃತ್ಯದ ಬಳಿಕ, ಸೆಪ್ಟೆಂಬರ್ 6 ರಂದು ಆರೋಪಿ ರಾಮಾನುಜ್ ಪೊಲೀಸರಿಗೆ ಶರಣಾಗಿದ್ದ. ಆತನ ಏಳು ದಿನಗಳ ಪೊಲೀಸ್ ಕಸ್ಟಡಿ ಅವಧಿ ಭಾನುವಾರಕ್ಕೆ ಕೊನೆಗೊಂಡಿದ್ದರಿಂದ, ಸೋಮವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯಲಾಗುತ್ತಿತ್ತು. ಈ ಹಿಂದೆ ಸೆಪ್ಟೆಂಬರ್ 8 ರಂದು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆರೋಪಿ, “ನಾನು ಮಾಡಿದ ಅಪರಾಧಕ್ಕೆ ಯಾವುದೇ ವಿಷಾದವಿಲ್ಲ, ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ಜೈಲಿನಿಂದ ಹೊರ ಬಂದ ಮೇಲೆ ನನ್ನ ಹೆಂಡತಿಯ ಶುಗರ್ ಡ್ಯಾಡಿಯನ್ನು ಕೊಲ್ಲುತ್ತೇನೆ” ಎಂದು ಉದ್ಧಟತನದ ಹೇಳಿಕೆ ನೀಡಿದ್ದ.
ಕ್ಯಾಬ್ ಚಾಲಕನಾಗಿದ್ದ ರಾಮಾನುಜ್, ಕಳೆದ ವರ್ಷ ಸೆಪ್ಟೆಂಬರ್ 22 ರಂದು ರಿಯಾ ತಾಲೂಕ್‌ದಾರ್ ಎಂಬಾಕೆಯನ್ನು ಮದುವೆಯಾಗಿದ್ದ. ಈ ದಂಪತಿ ಗುವಾಹಟಿಯ ಬೆಲ್ಟೋಲಾ ಪ್ರದೇಶದ ಬಸಿಸ್ಥಾಪುರದಲ್ಲಿ ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದರು. ಸೆಪ್ಟೆಂಬರ್ 3 ರ ಬೆಳಿಗ್ಗೆ ಪತ್ನಿಯ ವಿವಾಹೇತರ ಸಂಬಂಧದ ಕುರಿತು ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಕೋಪೋದ್ರಿಕ್ತನಾದ ರಾಮಾನುಜ್, ಪತ್ನಿಯ ಶಿರಚ್ಛೇದ ಮಾಡಿ ಕತ್ತರಿಸಿದ ತಲೆಯನ್ನು ತಂದಿಟ್ಟು ಫ್ರಿಡ್ಜ್ ಒಳಗೆ ಇಟ್ಟಿದ್ದ. ಪೊಲೀಸರು ಆತನನ್ನು ಬಂಧಿಸಿದ ಬಳಿಕ ಆತನ ಫ್ಲಾಟ್‌ನಿಂದ ಮೃತದೇಹ ಹಾಗೂ ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡಿದ್ದರು.





