June 9, 2026

ಬೆಳ್ತಂಗಡಿ: ಸರಣಿ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ-23 ಲಕ್ಷದ ಚಿನ್ನಾಭರಣ ವಶಕ್ಕೆ

0
IMG-20260609-WA0001

ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂತರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು ರೂ. 23,67,000/- ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ:
ಹಮೀದ್ (42): ಕಾಸರಗೋಡು ನಿವಾಸಿ (ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕರಾಯಿ ನಿವಾಸಿ). ಈತನನ್ನು ಮೇ 15, 2026 ರಂದು ಬಂಧಿಸಲಾಗಿತ್ತು.

ಜಾಬೀರ್ @ ಜಾಬೀ (38): ಕಾಸರಗೋಡು ನಿವಾಸಿ (ಮೂಲತಃ ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ). ಹಮೀದ್ ನೀಡಿದ ಮಾಹಿತಿ ಮೇರೆಗೆ ಈತನನ್ನು ಜೂನ್ 07, 2026 ರಂದು ಕಾಸರಗೋಡಿನಲ್ಲಿ ಬಂಧಿಸಲಾಗಿದೆ.

ಪ್ರಕರಣದ ಹಿನ್ನೆಲೆ ಮತ್ತು ತನಿಖೆ:
ಕಳೆದ ಏಪ್ರಿಲ್ 5, 2026 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿತ್ತು. ಈ ಕುರಿತು ದಾಖಲಾಗಿದ್ದ ಅ.ಕ್ರ: 38/2026 ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸ್ ತಂಡ ಮೊದಲು ಹಮೀದ್‌ನನ್ನು ತಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಜಾಲ ಪತ್ತೆಯಾಗಿದೆ.

ವಶಪಡಿಸಿಕೊಂಡ ಸೊತ್ತುಗಳು: ಆರೋಪಿಗಳಿಂದ ಈ ಕೆಳಗಿನ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ:

ಪುಂಜಾಲಕಟ್ಟೆ ಠಾಣಾ ಪ್ರಕರಣಕ್ಕೆ ಸಂಬಂಧಿಸಿ: 68.690 ಗ್ರಾಂ ಚಿನ್ನಾಭರಣ ಮತ್ತು ರೂ. 2,00,000/- ನಗದು.

ಉಪ್ಪಿನಂಗಡಿ ಠಾಣಾ ಪ್ರಕರಣಕ್ಕೆ (ಅ.ಕ್ರ: 28/2025) ಸಂಬಂಧಿಸಿ: 21.810 ಗ್ರಾಂ ಚಿನ್ನಾಭರಣ.

ಇತರ: ಕೃತ್ಯಕ್ಕೆ ಬಳಸಿದ ಕಾರು. (ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ರೂ. 23,67,000/-)

ಪೊಲೀಸ್ ತನಿಖೆಯ ವೇಳೆ ಈ ಆರೋಪಿಗಳು ಕರಾವಳಿಯ ವಿವಿಧೆಡೆ ಸರಣಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಕುಂಬಳೆ, ಉಪ್ಪಿನಂಗಡಿ, ಬಂಟ್ವಾಳ ನಗರ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 5 ಕಳ್ಳತನ ಪ್ರಕರಣಗಳಲ್ಲಿ ಈ ಇಬ್ಬರು ಭಾಗಿಯಾಗಿರುವುದು ದೃಢಪಟ್ಟಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾರ್ಯಾಚರಣೆ ನಡೆಸಿದ ತಂಡ:
ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಉಪವಿಭಾಗಾಧೀಕ್ಷಕಿ (DySP) ಶ್ರೀಮತಿ ರೋಹಿಸಿ ಸಿ.ಕೆ. ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ತಂಡದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಉಪ್ಪಿನಂಗಡಿ ಗ್ರಾಮಾಂತರ ಸಿ.ಪಿ.ಐ ನಾಗರಾಜ್ ಹೆಚ್.ಇ, ಪುಂಜಾಲಕಟ್ಟೆ ಪಿ.ಎಸ್.ಐ ರಾಜೇಶ್ ಕೆ.ವಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರು ತಾಂತ್ರಿಕ ನೆರವು ನೀಡಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆ ಮತ್ತು ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!