ಹಾಡ ಹಗಲು ಗುಂಡು ಹಾರಿಸಿ ಬ್ಯಾಂಕ್ ಲೂಟಿ:
ಸಿಬ್ಬಂದಿಯ ಹತ್ಯೆ
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಶಾಖೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದು, ಓರ್ವ ಉದ್ಯೋಗಿ ಸಾವನ್ನಪ್ಪಿದ್ಧಾರೆ.
ಮುಂಬೈನ ಎಂಹೆಚ್‌ಬಿ ಕಾಲೋನಿಯ ಜಯವಂತ್ ಸಾವಂತ್ ರಸ್ತೆಯಲ್ಲಿರುವ ಶಾಖೆಯಲ್ಲಿ ಈ ಘಟನೆ ನಡೆಸಿದ್ದು, ಹಗಲು ಹೊತ್ತಿನಲ್ಲಿಯೇ ಭಾರಿ ದರೋಡೆ ನಡೆಸಿದ್ದಾರೆ. ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ನೋಡಿಕೊಂಡಿದ್ದ ಯುವಕರ ಗುಂಪೊಂದು ಸಂಚುಹೂಡಿ ಈ ಕೃತ್ಯ ಎಸಗಿದೆ.
ಬೆಳಗ್ಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದಂತೆಯೇ ಇಬ್ಬರು ಮುಸುಕುಧಾರಿಗಳು ಬ್ಯಾಂಕ್ ಒಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದು, ಪರಿಣಾಮ ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವರು ಸಾವನ್ನಪ್ಪಿದ್ದಾರೆ. ಇಬ್ಬರು ಮುಸುಕುಧಾರಿಗಳು ಕ್ಯಾಷಿಯರ್‌ನಿಂದ ಸುಮಾರು 2.5 ಲಕ್ಷ ರೂ. ದೋಚಿ ಪರಾರಿಯಾಗಿದ್ಧಾರೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಗಳು, “ಬಂದೂಕು ಹಿಡಿದುಕೊಂಡು ಬಂದಿದ್ದ ದರೋಡೆಕೋರರು ನಮ್ಮನ್ನು ಬೆದರಿಸಿದ್ದು, ಕೂಡಲೇ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಳಿಕ ಹಣ ದೋಚಿ ಪರಾರಿಯಾಗಿದ್ದಾರೆ” ಎಂದಿದ್ದಾರೆ.
“ದರೋಡೆಕೋರರು ಸ್ಕಾರ್ಫ್ ಹಾಗೂ ಕ್ಯಾಪ್‌ನಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಹಾಗಾಗಿ ಅವರ ಮುಖವನ್ನು ಗುರುತಿಸಲು ಸಾಧ್ಯವಾಗಿಲ್ಲ. ಇವರೆಲ್ಲಾ ಸುಮಾರು 20-25 ವರ್ಷದ ವಯಸ್ಸಿನವರಿರಬಹುದು. ಅವರು ದಹಿಸರ್ ರೈಲ್ವೆ ನಿಲ್ದಾಣದ ಕಡೆಗೆ ಪರಾರಿಯಾಗಿದ್ದಾರೆ” ಎಂದು ಸಿಬ್ಬಂದಿ ತಿಳಿಸಿದ್ಧಾರೆ.
“ಆರೋಪಿಗಳ ಬಂಧನಕ್ಕೆ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಎಂಟು ತಂಡಗಳನ್ನು ರಚಿಸಲಾಗಿದೆ” ಎಂದು ಉತ್ತರ ವಲಯದ ಹೆಚ್ಚುವರಿ ಸಿಪಿ ಪ್ರವಿಂದ್ ಪಡವಾಲ್ ಮಾಹಿತಿ ನೀಡಿದ್ದಾರೆ.