ಪ್ರತಿಪಕ್ಷಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಮತಾಂತರ ನಿಯಂತ್ರಣ ಕಾಯ್ದೆ ಜಾರಿಗೊಳಿಸಿಯೇ ಸಿದ್ಧ: ಬೊಮ್ಮಾಯಿ
ಬೆಂಗಳೂರು: “ಪ್ರತಿಪಕ್ಷಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ರಾಜ್ಯದಲ್ಲಿ ಮತಾಂತರ ನಿಯಂತ್ರಣ ಕಾಯ್ದೆ ಜಾರಿಗೊಳಿಸಿಯೇ ಸಿದ್ಧ. ಈ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿರುವುದಾಗಿ ಬಿಜೆಪಿ ಟ್ವೀಟ್ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ, “ಪ್ರತಿಪಕ್ಷಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ರಾಜ್ಯದಲ್ಲಿ ಮತಾಂತರ ನಿಯಂತ್ರಣ ಕಾಯ್ದೆ ಜಾರಿಗೊಳಿಸಿಯೇ ಸಿದ್ಧ. ಈ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಯ್ದೆಯ ಜಾರಿಗಾಗಿ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ” ಎಂದು ಹೇಳಿರುವುದಾಗಿ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ರಾಜ್ಯದಲ್ಲಿನ ಹಿಂದೂ ದೇವಾಲಯಗಳ ಮೇಲಿ ಸರ್ಕಾರದ ಹಿಡಿತವನ್ನು ಸಡಿಲಗೊಳಿಸಿ ಕಾನೂನಿನ ಕಟ್ಟುಪಾಡುಗಳಿಂದ ಮುಕ್ತಗೊಳಿಸುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದ್ದು, ಬುಧವಾರ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಸಮಾರೋಪದಲ್ಲಿ ಈ ಕುರಿತು ಸುಳಿವು ನೀಡಿದ್ದಾರೆ.
“ಕೊಪ್ಪಳದ ಅಂಜನಾದ್ರಿ ಬೆಟ್ಟವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುತ್ತೇವೆ. ದೇವಾಲಯಗಳನ್ನು ಕಾನೂನಿನ ಕಟ್ಟುಪಾಡುಗಳಿಂದ ಮುಕ್ತಗೊಳಿಸುತ್ತೇವೆ. ದೇವಾಲಯದ ಹಣ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು, ಇದಕ್ಕಾಗಿ ಕಾನೂನು ರೂಪಿಸುತ್ತೇವೆ” ಎಂದಿರುವುದಾಗಿ ಬಿಜೆಪಿ ಟ್ವೀಟ್‌ನಲ್ಲಿ ತಿಳಿಸಿದೆ.