May 20, 2026

ಪಂಚಾಯತ್ ರಾಜ್ ಬಲವರ್ಧನೆಗೆ ಸಂಘಟನೆಯ ಸಂಕಲ್ಪ: ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆಗೆ ನಿರ್ಧಾರ: ಕುಳಾಲು ಸುಭಾಶ್ಚಂದ್ರ ಶೆಟ್ಟಿ

0
IMG-20260520-WA0113

ಮಂಗಳೂರು, ಮೇ 19: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಮಾಸಿಕ ಸಭೆಯು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ. ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಂಘಟನೆಯನ್ನು ಸಕ್ರಿಯಗೊಳಿಸುವ ಬಗ್ಗೆ ಮಹತ್ವದ ಚರ್ಚೆಗಳು ನಡೆದವು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ. ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು, “SIR” ಮತದಾರರ ಮ್ಯಾಪಿಂಗ್ ಕಾರ್ಯವನ್ನು ಪಂಚಾಯತ್ ರಾಜ್ ಸಂಘಟನೆಯ ಸದಸ್ಯರು ಗ್ರಾಮೀಣ ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು. ಬೂತ್ ಹಾಗೂ ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಮನ್ವಯದಿಂದ ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.

ಪಂಚಾಯತ್ ರಾಜ್ ವ್ಯವಸ್ಥೆಯ ಆರ್ಥಿಕ ಸ್ವಾಯತ್ತತೆಗೆ ಧಕ್ಕೆಯುಂಟು ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ, ನೀಟ್ ಪರೀಕ್ಷೆಯ ಅವ್ಯವಸ್ಥೆ, ಮಹಿಳಾ ಮೀಸಲಾತಿ ವಿಚಾರದಲ್ಲಿ ನಡೆಯುತ್ತಿರುವ ವಿಳಂಬ, ಗ್ಯಾಸ್ ಹಾಗೂ ಪೆಟ್ರೋಲ್ ದರ ಏರಿಕೆ ಸೇರಿದಂತೆ ವಿವಿಧ ಜನವಿರೋಧಿ ನೀತಿಗಳ ವಿರುದ್ಧ ಸಂಬಂಧಪಟ್ಟ ಕಚೇರಿಗಳ ಎದುರು ಪ್ರತಿಭಟನೆಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಇದೇ ವೇಳೆ, ಸಂಘಟನೆಯ ವತಿಯಿಂದ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳುವ ನಿರ್ಧಾರವೂ ಕೈಗೊಳ್ಳಲಾಯಿತು. ಸಭೆಯಲ್ಲಿ ಮಹಿಳಾ ಪಂಚಾಯತ್ ರಾಜ್ ಸಂಘಟನೆಯ ಸಂಚಾಲಕಿ ಶ್ರೀಮತಿ ವೃಂದ ಪೂಜಾರಿ ಸಹಿತ,ಜಿಲ್ಲಾ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಭಾಗವಹಿಸಿ ಸಂಘಟನೆಯ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.ಸಂಘಟನೆಯ ಪ್ರದಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಸ್ವಾಗತಿಸಿ,ಹೈದರ್ ಕೈರಂಗಳ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!