ವಿಟ್ಲ: ಮಿತ್ತೂರು ಬಳಿ ಭೀಕರ ಅಪಘಾತ ಪ್ರಕರಣ: ಗಾಯಾಳು ಸೋಫಾ ಸಲೀಮ್ ಮೃತ್ಯು
ವಿಟ್ಲ: ಮಾಣಿ ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಮಹಿಂದ್ರಾ ಪಿಕಪ್ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕ್ಟಿವಾ ಸವಾರ ಮೃತಪಟ್ಟ ಘಟನೆ ಘಟನೆ ನಡೆದಿದೆ.
ಕಬಕ ನಿವಾಸಿ, ಸೋಫಾ ಹಾಗೂ ವಾಹನಗಳ ಕುಶನ್ ಕೆಲಸ ಮಾಡಿಕೊಂಡಿದ್ದ ಸಲೀಂ (52) ಮೃತಪಟ್ಟ ದುರ್ದೈವಿ.
ಸಾಧು ಸ್ವಭಾವದ ಸಲೀಂ ಅವರು ಮಿತ್ತೂರು ದಾರುಲ್ ಇಸ್ಲಾಂ ಶಿಕ್ಷಣ ಸಂಸ್ಥೆಯ ವಾಹನದ ಕೆಲಸವನ್ನು ನೋಡಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕಬಕ ಕಡೆಯಿಂದ ಮಿತ್ತೂರು ಕಡೆಗೆ ಮಿತಿಮೀರಿದ ವೇಗದಲ್ಲಿ ಬಂದ ಮಹಿಂದ್ರಾ ಪಿಕಪ್ ವಾಹನವು ಸಲೀಂ ಅವರ ಆಕ್ಟಿವಾ ಸ್ಕೂಟರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಸಲೀಂ ಅವರು ಹೆಲ್ಮೆಟ್ ಧರಿಸಿದ್ದರೂ ಅವರ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಹಾಗೂ ದಾರಿಹೋಕರು ಸೇರಿ ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಕೂಟರ್‌ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಮಹಿಂದ್ರಾ ಪಿಕಪ್ ರಸ್ತೆ ಬದಿಯ ಗುಡ್ಡದಂತಿದ್ದ ಜಾಗಕ್ಕೆ ನುಗ್ಗಿ ಪಲ್ಟಿ ಹೊಡೆದಿದೆ.





