ಭೀಕರ ರಸ್ತೆ ಅಪಘಾತ: ತೆಲುಗು ಚಿತ್ರರಂಗದ ನಟ ಮೃತ್ಯು
ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರಸ್ತೆಯಲ್ಲಿ (ORR) ರವಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಕೆ. ಭರತ್ ಕಾಂತ್ (31) ಮತ್ತು ಸಿನಿಮಾಟೋಗ್ರಾಫರ್ ಜಿ. ಸಾಯಿ ತ್ರಿಲೋಕ್ (31) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೇ 10ರ ರವಿವಾರ ಮುಂಜಾನೆ ಸುಮಾರು 3:20ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರಿಬ್ಬರೂ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯವರಾಗಿದ್ದು, ಕೆಲಸದ ನಿಮಿತ್ತ ನೆಲ್ಲೂರಿಗೆ ಹೋಗಿ ಅಲ್ಲಿಂದ ಕಾರಿನಲ್ಲಿ ಹೈದರಾಬಾದ್‌ಗೆ ಮರಳುತ್ತಿದ್ದರು. ಕಾರು ಎಕ್ಸಿಟ್ ನಂ. 12 ಬಳಿ ತಲುಪಿದಾಗ ನಿಯಂತ್ರಣ ತಪ್ಪಿ, ಮುಂದೆ ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಕಾರು ಲಾರಿಯ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿದ್ದು, ಲಾರಿಯ ಹಿಂದಿನ ಎರಡು ಚಕ್ರಗಳು ಕಳಚಿ ಬಿದ್ದಿವೆ. ಅಪಘಾತ ಸಂಭವಿಸಿದ ತಕ್ಷಣ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.





