ಭಾರತ ‘ವಿಶ್ವಗುರು ಅಲ್ಲ, ಆ ಪದವನ್ನು ಬಳಸಬೇಡಿ: ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಹೇಳಿಕೆ
ನವದೆಹಲಿ: ಭಾರತವು ಈಗ ‘ವಿಶ್ವಗುರು’ ಆಗಿ ಉಳಿದಿಲ್ಲ, ಆದ್ದರಿಂದ ಆ ಪದವನ್ನು ಬಳಸಬಾರದು ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೋಮವಾರ ಹೇಳಿದ್ದಾರೆ. ನಾವು ಒಂದು ಕಾಲದಲ್ಲಿ ವಿಶ್ವಗುರು ಆಗಿದ್ದೆವು ಎಂಬುದು ಸತ್ಯ, ಆದರೆ ಸದ್ಯಕ್ಕೆ ಆ ಸ್ಥಿತಿಯಲ್ಲಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ‘ಸಂಸ್ಕೃತ ಭಾರತೀ’ಯ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತವು ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಆಧುನಿಕ ತಂತ್ರಜ್ಞಾನದಲ್ಲಿ ಸಂಸ್ಕೃತದ ಬಳಕೆಯನ್ನು ಪ್ರತಿಪಾದಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. “ಭಾರತವು ವಿಶ್ವಗುರು ಆಗುತ್ತಿರುವ ಈ ಸಂದರ್ಭದಲ್ಲಿ ಸಂಸ್ಕೃತದ ಪಾತ್ರವೇನು?” ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, “ವಿಶ್ವಗುರು ಎಂಬ ಪದ ಬಳಸುವುದರಿಂದ ನಾವು ದೂರ ಇರಬೇಕು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಸದ್ಯ ನಾವು ವಿಶ್ವಗುರು ಅಲ್ಲ. ನಾವು ಮತ್ತೆ ಆ ಸ್ಥಾನಕ್ಕೇರಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು,” ಎಂದು ಉತ್ತರಿಸಿದರು. ವಾಸ್ತವವನ್ನು ಒಪ್ಪಿಕೊಂಡು ಮುನ್ನಡೆಯುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂಬುದು ಜೋಶಿ ಅವರ ಪ್ರಬಲ ಒತ್ತಾಯವಾಗಿತ್ತು. “ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಗಣ್ಯರು ಈ ಹಿಂದೆ ಸಂಸ್ಕೃತಕ್ಕೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಪ್ರಯತ್ನಿಸಿದ್ದರು. ಆದರೆ, ದುರದೃಷ್ಟವಶಾತ್ ಆ ಪ್ರಸ್ತಾವನೆಗಳು ಅಂದು ಅಂಗೀಕಾರವಾಗಲಿಲ್ಲ,” ಎಂದು ಅವರು ಸ್ಮರಿಸಿದರು.




