ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗಡಿ ಏಲಂನಲ್ಲಿ ಭ್ರಷ್ಟಾಚಾರ: ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಆರೋಪ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗಡಿ ಏಲಂ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಗಂಭೀರ ಆರೋಪ ಮಾಡಿದೆ.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹೇಶ್ ದಾಸ್ ಅವರು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಗದ್ದೆಯಲ್ಲಿ ವ್ಯಾಪಾರಕ್ಕೆ ಕೇವಲ 320 ಅಂಗಡಿಗಳಿಗೆ ಮಾತ್ರ ಅಧಿಕೃತವಾಗಿ ಏಲಂ ಮೂಲಕ ಅವಕಾಶ ನೀಡಲಾಗಿತ್ತು. ಆದರೆ, ಪ್ರಸ್ತುತ 700ಕ್ಕೂ ಅಧಿಕ ಅಂಗಡಿಗಳು ಕಾರ್ಯಾಚರಿಸುತ್ತಿವೆ ಎಂದು ಅವರು ದೂರಿದರು.
“ಅಧಿಕೃತವಾಗಿ ನಿಗದಿಪಡಿಸಿದ 320 ಅಂಗಡಿಗಳಿಗಿಂತ ಹೆಚ್ಚುವರಿಯಾಗಿ ಇರುವ 400ಕ್ಕೂ ಹೆಚ್ಚು ಅಂಗಡಿಗಳಿಂದ ಅನಧಿಕೃತವಾಗಿ ಹಣ ವಸೂಲಿ ಮಾಡಲಾಗಿದೆ. ಈ ಹಣವು ದೇವಸ್ಥಾನದ ಬೊಕ್ಕಸಕ್ಕೆ ಸೇರುವ ಬದಲು ಭ್ರಷ್ಟಾಚಾರಿಗಳ ಪಾಲಾಗಿದೆ. ಇದರಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧಿಕಾರಿ ವರ್ಗದವರು ಭಾಗಿಯಾಗಿದ್ದಾರೆ,” ಎಂದು ಮಹೇಶ್ ದಾಸ್ ಆರೋಪಿಸಿದರು.ಮಂಗಳೂರುನಲ್ಲಿ ಪ್ರಥಮ ಬಾರಿಗೆ RAS ಬಳಸಿಕೊಂಡು ಮಡ್ ಏಡಿಗಳ ಸಾಕಾಣಿಕೆ
ಹಣ ವಸೂಲಿಗೆ ಸಂಬಂಧಿಸಿದಂತೆ ದೇವಸ್ಥಾನದ ಅಧಿಕೃತ ಲೆಟರ್ ಹೆಡ್ ಬಳಸುವ ಬದಲಾಗಿ, ಸಾಮಾನ್ಯ ಬಿಳಿ ಕಾಗದದ ಚೂರುಗಳಲ್ಲಿ ದೇವಸ್ಥಾನದ ಸೀಲ್ ಹಾಕಿ ಹಣ ಪಡೆದುಕೊಳ್ಳಲಾಗುತ್ತಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.




