July 13, 2026

ವಿಟ್ಲ ಗ್ರಾಮೀಣ ಸಹಕಾರಿ ಸಂಘ: 1090ಕೋಟಿ ರೂ. ವ್ಯವಹಾರ, 4.05 ಕೋಟಿ ರೂ. ಲಾಭ

0
image_editor_output_image-1877011125-1775913392259

ವಿಟ್ಲ: ಗ್ರಾಮೀಣ ಸಹಕಾರಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ 1090ಕೋಟಿ ರೂ. ವ್ಯವಹಾರ ನಡೆಸಿ,4.05 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ತಿಳಿಸಿದರು.

ಎ.10ರ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘವು ಪ್ರಸಕ್ತ ಸಾಲಿನಲ್ಲಿ ಯಶಸ್ವಿಯಾಗಿ ಗುರಿ ತಲುಪಿ ಹೊಸ ಇತಿಹಾಸ ನಿರ್ಮಿಸಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮ ಹೊರತು ಉಳಿದೆಲ್ಲ ತಾಲೂಕುಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದ್ದು, ವಿಟ್ಲದಲ್ಲಿ‌ ಪ್ರಧಾನ ಕಚೇರಿಯನ್ನು ಹೊಂದಿದೆ. ಕನ್ಯಾನ, ಕಲ್ಲಡ್ಕ, ಬಿ. ಸಿ. ರೋಡ್ ಮತ್ತು ಪುತ್ತೂರಿನಲ್ಲಿ ಶಾಖೆಗಳಿದ್ದು, 9189 ಸದಸ್ಯರಿದ್ದಾರೆ‌. 3.04ಕೋಟಿ ರೂ. ಪಾಲು ಬಂಡವಾಳ ಇದ್ದು, ಕಳೆದ ಸಾಲಿನ ವ್ಯವಹಾರಕ್ಕಿಂತ ಈ ಸಾಲಿನಲ್ಲಿ 226 ಕೋಟಿ ರೂ. ಹೆಚ್ಚು ವ್ಯವಹಾರ ನಡೆಸಿ ಅದ್ಭುತ ದಾಖಲೆ ಮಾಡಿದೆ ಎಂದರು.

95.11% ಸಾಲ‌ ವಸೂಲಾತಿ:
ಆಧುನಿಕ ಬ್ಯಾಂಕಿಂಗ್ ಯುಗದಲ್ಲಿ ಪೈಪೋಟಿಯ ಮಧ್ಯೆಯೂ 149.84ಕೋಟಿ ರೂ. ಠೇವಣಿ ಸಂಗ್ರಹ ಮಾಡಿದ್ದು, ಕಳೆದ ಸಾಲಿಗಿಂತ 11.22ಶೇಕಡಾ ಅಧಿಕವಾಗಿದೆ. ಹೊರಬಾಕಿ ಸಾಲ 125.63ಕೋಟಿ ರೂ.‌ಸಾಲ‌ ವಸೂಲಾತಿ ಶೇಕಡಾ 95.11 ಆಗಿದ್ದು, ಇದು ಕೂಡ ಕಳೆದ ಸಾಲಿಗಿಂತ ಹೆಚ್ಚು ದಾಖಲಾಗಿದೆ.ಪ್ರಸ್ತುತ ಸಂಘದಲ್ಲಿ 9.96ಕೋಟಿ ರೂ. ಮೀಸಲು ನಿಧಿ ಹಾಗೂ 13.65ಕೋಟಿ ರೂ. ಗಳ ಇತರ ನಿಧಿಗಳಿವೆ. 4.43 ಕೋಟಿ ರೂ.ಗಳ ಚರ ಮತ್ತು ಸ್ಥಿರಾಸ್ತಿಗಳಿವೆ ಸಂಘದ ದುಡಿಯುವ ಬಂಡವಾಳ 180.55 ಕೋಟಿ ರೂ.ಗಳಾಗಿವೆ. ಸಂಘವು ಹಲವು ವರ್ಷಗಳಿಂದ ಅಡಿಟ್ ವರ್ಗೀಕರಣದಲ್ಲಿ ಎ ತರಗತಿಯಲ್ಲಿ ಇದ್ದು, ಕಳೆದ ಸಾಲಿನಲ್ಲಿ ಶೇಕಡಾ 22 ಡಿವಿಡೆಂಡ್ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

160 ಕೋಟಿ ರೂ. ಠೇವಣಿ ಸಂಗ್ರಹಣೆ ಗುರಿ:
ಸಂಘವು 2026-27ನೇ ಸಾಲಿನಲ್ಲಿ 160 ಕೋಟಿ ರೂ. ಅಧಿಕ ಠೇವಣಿ ಸಂಗ್ರಹಣೆ, 135 ಕೋಟಿ ರೂ. ಗೂ ಮೀರಿ ಸಾಲ ನೀಡಿಕೆ, 4.45ಕೋಟಿ ರೂ. ಗೂ ಹೆಚ್ಚಿನ ಲಾಭ ಹಾಗೂ 96 ಶೇಕಡಾ ಸಾಲ‌ ವಸೂಲಾತಿ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅಧ್ಯಕ್ಷರು ವಿವರಿಸಿದರು.

ಶೀಘ್ರದಲ್ಲೇ ಉಪ್ಪಿನಂಗಡಿ ಶಾಖೆ:
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಂಘವು ಸತತ ನಾಲ್ಕು ಬಾರಿ ಸಾಧನಾ ಪ್ರಶಸ್ತಿಯನ್ನು ಪಡೆದಿದೆ. ಮುಂದಿನ  ಕೆಲವೇ ದಿನಗಳಲ್ಲಿ ಸಂಘದ ಐದನೇ ಶಾಖೆಯನ್ನು ಉಪ್ಪಿನಂಗಡಿಯಲ್ಲಿ ಆರಂಭ ಮಾಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ‌

ಸಂಘದ ಉಪಾಧ್ಯಕ್ಷ ಮನೋರಂಜನ್ ಕೆ. ಆರ್. ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಪೂರಕ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಜಯಂತಿ ಎಚ್. ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ., ಪೂವಪ್ಪ ಎಸ್., ದಿವಾಕರ ವಿ., ಕೇಶವ ಎ., ಗೋವರ್ಧನ ಕುಮಾರ್ ಐ., ಭಾಸ್ಕರ್ ಶೆಟ್ಟಿ, ರಾಮದಾಸ ಶೆಣೈ, ಮೋಹನ ಕೆ. ಎಸ್., ವಿಶ್ವನಾಥ ಎಂ., ತಿರುಮಲೇಶ್ವರ ಭಟ್ ಪಿ. ಹಾಗೂ ಸತೀಶ್ ಪಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!