ಬೆಳ್ತಂಗಡಿ: ಕ್ರಿಕೆಟ್ ಆಡುವ ಕಾರಣಕ್ಕೆ ಜಗಳ: ಯುವಕನ ಮೇಲೆ ಕತ್ತಿಯಿಂದ ಭೀಕರವಾಗಿ ಹಲ್ಲೆ: ಕೊಲೆಗೆ ಯತ್ನಿಸಿದ ಆರೋಪಿ ಅರೆಸ್ಟ್
ಬೆಳ್ತಂಗಡಿ: ಕ್ರಿಕೆಟ್ ಆಡುವ ಸಂದರ್ಭದಲ್ಲಿ ಉಂಟಾದ ಕ್ಷುಲ್ಲಕ ಕಾರಣದ ಜಗಳವೊಂದು ವಿಕೋಪಕ್ಕೆ ತಿರುಗಿ, ಯುವಕನೋರ್ವನ ಮೇಲೆ ಕತ್ತಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಆರೀಫ್ (25) ಬಂಧಿತ ಆರೋಪಿಯಾಗಿದ್ದಾನೆ. ಈತನ ಹಲ್ಲೆಯಿಂದಾಗಿ ಅದೇ ಗ್ರಾಮದ ನಿವಾಸಿ ಆಸಿಫ್ (36) ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾಯಿಲ ಗ್ರಾಮದ ಹಕ್ಕೀಂ ಎಂಬವರಿಗೆ ಸೇರಿದ ಖಾಸಗಿ ಜಾಗದಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದರು. ಕಳೆದ ಮಾರ್ಚ್ 27ರಂದು ಪಂದ್ಯ ನಡೆಯುತ್ತಿದ್ದ ವೇಳೆ ಆರೋಪಿ ಆರೀಫ್ ಮತ್ತು ಸ್ಥಳೀಯ ನಿವಾಸಿ ರಿಯಾಜ್ (ಅಶ್ರಫ್) ಎಂಬವರ ನಡುವೆ ಜಗಳ ಉಂಟಾಗಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಆಸಿಫ್, ಇಬ್ಬರನ್ನೂ ಸಮಾಧಾನಪಡಿಸಿ ಜಗಳ ಬಿಡಿಸಿದ್ದರು. ಇದೇ ವಿಚಾರವಾಗಿ ಆಕ್ರೋಶಗೊಂಡಿದ್ದ ಆರೀಫ್, ಅಂದೇ ರಾತ್ರಿ ಆಸಿಫ್ ಅವರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದ ಎನ್ನಲಾಗಿದೆ.
ಮಾರ್ಚ್ 29ರ ಸಂಜೆ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕೆ ಬಂದಿದ್ದ ವೇಳೆ, ತನಗೆ ಬಂದ ಬೆದರಿಕೆ ಸಂದೇಶದ ಬಗ್ಗೆ ಆಸಿಫ್ ಆರೋಪಿಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಆರೀಫ್, ಸ್ಥಳದಿಂದ ನೇರ ಮನೆಗೆ ತೆರಳಿ ಕತ್ತಿಯೊಂದಿಗೆ ಮರಳಿದ್ದಾನೆ. ಆರೋಪಿ ಮಾರಕಾಸ್ತ್ರದೊಂದಿಗೆ ಬರುವುದನ್ನು ಕಂಡು ಪ್ರಾಣಭಯದಿಂದ ಆಸಿಫ್ ಅಲ್ಲಿಂದ ಓಡಿದ್ದಾರೆ. ಆದರೆ ಬೆನ್ನಟ್ಟಿ ಬಂದ ಆರೋಪಿ, ‘ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಆಸಿಫ್ ಅವರ ತಲೆಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾನೆ. ಗಲಾಟೆ ಕಂಡು ಸ್ಥಳೀಯರು ಓಡಿ ಬಂದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ಆರೀಫ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




