ನಿರ್ದೇಶಕನ ಅಪಹರಣ ಪ್ರಕರಣ: ನಟಿ ಐಶ್ವರ್ಯಾ ಸೇರಿ 11 ಜನರ ಬಂಧನ
ಬೆಂಗಳೂರು: ನಿರ್ದೇಶಕ ಅನೀಶ್ ಅವರನ್ನು ಅಪಹರಿಸಿ ಚಿನ್ನಾಭರಣ ದೋಚಿದ ಪ್ರಕರಣವನ್ನು ಆಡುಗೋಡಿ ಪೊಲೀಸರು ಭೇದಿಸಿದ್ದಾರೆ. ಭೀಮಾ ಸಿನಿಮಾದಲ್ಲಿ ನಟಿಸಿದ್ದ ನಟಿ ಐಶ್ವರ್ಯಾ ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ.
ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೆಲವು ಶಾರ್ಟ್ ಫಿಲ್ಮ್‌ಗಳನ್ನು ಮಾಡಿದ್ದ ಅನೀಶ್ ಇತ್ತೀಚೆಗೆ ‘ಜೀವನದ ಭಾಷೆ’ ಎಂಬ ಸಿನಿಮಾವನ್ನು ಆರಂಭಿಸಿದ್ದರು.
ಆದರೆ ಕೆಲವು ಕಾರಣಗಳಿಂದ ಸಿನಿಮಾ ಸ್ಥಗಿತಗೊಂಡಿದ್ದರಿಂದ ಅವರು ಮುಂಬೈಗೆ ಸ್ಥಳಾಂತರವಾಗಿದ್ದರು. ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದ ಅನೀಶ್ ತಮ್ಮ ಕಾರು ಮಾರಾಟದ ಕುರಿತು ಪರಿಚಿತ ನಟಿ ಐಶ್ವರ್ಯಾಗೆ ಮಾಹಿತಿ ನೀಡಿದ್ದರು.
ಈ ಮಾಹಿತಿಯನ್ನು ಆಧರಿಸಿಕೊಂಡ ಆರೋಪಿಗಳು ಕಾರು ಖರೀದಿಸುವುದಾಗಿ ನಂಬಿಸಿ, ನಟಿಯ ಮೂಲಕ ಅನೀಶ್ ಅವರನ್ನು ಆಡುಗೋಡಿ ವ್ಯಾಪ್ತಿಯಲ್ಲಿರುವ ಸ್ಥಳವೊಂದಕ್ಕೆ ಕರೆಸಿಕೊಂಡಿದ್ದರು.
ಅಲ್ಲಿಗೆ ಬಂದ ನಿರ್ದೇಶಕನನ್ನು ಕಾರಿನಲ್ಲಿ ಅಪಹರಿಸಿ ಬ್ಯಾರಹಳ್ಳಿ ಪ್ರದೇಶದ ಮನೆಯೊಂದರಲ್ಲಿ ಬಂಧಿಸಿ ಇಟ್ಟಿದ್ದರು. ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ, ಅವರ ಬಳಿಯಿದ್ದ ಚಿನ್ನಾಭರಣ ದೋಚಿಕೊಂಡು ನಂತರ ತುಮಕೂರು ಜಿಲ್ಲೆಯ ಮಧುಗಿರಿ ಬಳಿ ಬಿಟ್ಟು ಪರಾರಿಯಾಗಿದ್ದರು.
ಈ ಸಂಬಂಧ ಅನೀಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿ, ನಟಿ ಐಶ್ವರ್ಯಾ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ.
ಅನೀಶ್ ಈ ಹಿಂದೆ ‘ಭರವಸೆಯ ಜೀವನ’ ಎಂಬ ಶಾರ್ಟ್ ಮೂವಿ ನಿರ್ಮಿಸಿ ಗಮನ ಸೆಳೆದಿದ್ದರು. ಬಳಿಕ ‘ಜೀವನದ ಭಾಷೆ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು. ಭೀಮಾ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ ಮೂಲಕವೇ ಆರೋಪಿಗಳು ನಿರ್ದೇಶಕನ ಸಂಪರ್ಕ ಸಾಧಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತನೇ ಸಂಪೂರ್ಣ ಪ್ಲ್ಯಾನ್ ರೂಪಿಸಿದ್ದಾನೆ ಎನ್ನಲಾಗಿದೆ. ಸುಮಾರು 5 ಲಕ್ಷ ರೂಪಾಯಿ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆಯೇ ಅಪಹರಣಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.




