February 28, 2026

ಮಂಗಳೂರು: ಚೈನ್ ಲಿಂಕ್ ಬ್ಯುಸಿನೆಸ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ: ವೆಕ್ಸಾನ್ ಕಂಪೆನಿಯಿಂದ ವಿದ್ಯಾರ್ಥಿಗಳಿಗೆ ಮೋಸ

0
image_editor_output_image-1933121155-1772149707546.jpg

ಮಂಗಳೂರು: ಚೈನ್ ಲಿಂಕ್ ಬ್ಯುಸಿನೆಸ್ ಹೆಸರಿನಲ್ಲಿ ಮಹಾರಾಷ್ಟ್ರ ಮೂಲದ ವೆಕ್ಸಾನ್ ಕಂಪೆನಿಯಿಂದ ವಿಧ್ಯಾರ್ಥಿಗಳಿಗೆ ವಂಚನೆ ಆಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಮಂಗಳೂರಿನ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಮಾರ್ಕೆಟಿಂಗ್ ಉದ್ಯೋಗ ನೀಡುವುದಾಗಿ ಹೇಳಿ ನೂರಾರು ಮಂದಿಗೆ ಕೋಟ್ಯಂತರ ರೂ. ವಂಚಿಸಿದೆ.

ಕಂಪನಿಯಿಂದ ಹಣ ಕಳಕೊಂಡು ಮೋಸ ಹೋದ ವಿದ್ಯಾರ್ಥಿಗಳು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. ಎನ್ಎಸ್ ಯುಐ ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳ ನಾಯಕರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದು, ನಕಲಿ ಕಂಪನಿಗಳ ಬಾಗಿಲು ಹಾಕೋ ವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಜಾಲತಾಣದಲ್ಲಿ ಉದ್ಯೋಗ ಆಫರ್ ಜಾಹೀರಾತು ನೋಡಿ ಅಲ್ಲಿಗೆ ತೆರಳಿದ್ದೆ. ವೆಬ್ ಡಿಸೈನರ್, ವೆಬ್ ಡೆವಲಪರ್ ಉದ್ಯೋಗ ಇದೆಯೆಂದು ಹೇಳಿದ್ದರು. ಮೊದಲಿಗೆ ತರಬೇತಿ ಇರುತ್ತದೆ, ಇದಕ್ಕಾಗಿ ಮೂರು ದಿನ ಇಲ್ಲಿಯೇ ನಿಲ್ಲಬೇಕು, ಊಟ ವಸತಿ ಕೊಡುತ್ತೇವೆ. ಅದಕ್ಕಾಗಿ 2500 ರೂ. ನೀಡಬೇಕಾಗುತ್ತದೆ. ತರಬೇತಿ ಮುಗಿದ ಮೇಲೆ ತಿಂಗಳಿಗೆ 32 ಸಾವಿರ ಸಂಬಳಕ್ಕೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ತರಬೇತಿ ವೇಳೆ ಫುಲ್ ಬ್ರೇನ್ ವಾಷ್ ಮಾಡುತ್ತಾರೆ, ನಮ್ಮ ಮನೆಯ ಬಡತನ ಎಲ್ಲವನ್ನೂ ತಿಳಿದುಕೊಂಡು ಇಲ್ಲಿ ದುಡಿದರೆ ಕೆಲವೇ ತಿಂಗಳಲ್ಲಿ ಲಕ್ಷಾಂತರ ಸಂಪಾದನೆ ಮಾಡಬಹುದು ಎಂದು ಹೇಳಿ ಅರಮನೆ ತೋರಿಸುತ್ತಾರೆ.

ಸ್ವಸ್ತಿಕ್ ಸ್ಕೂಲ್ ವಿದ್ಯಾರ್ಥಿ ಸಂಘದ ಮತ್ತು ಎಬಿವಿಪಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾತ್ವಿಕ್ ಮುಳಿಯ ಮಾತನಾಡಿ, ಇದೊಂದು ಪಕ್ಕಾ ಬ್ಲೇಡ್ ಕಂಪನಿಯಾಗಿದ್ದು, ಮಂಗಳೂರಿನಲ್ಲಿ ಎರಡು ವರ್ಷಗಳಿಂದ ಯುವ ಜನರನ್ನು ಯಾಮಾರಿಸಿ ಸುಲಿಗೆ ಮಾಡುತ್ತಿದೆ. ಇದು ಮೋಸದ ಜಾಲವೆಂದು ನಮಗೆ ಫೋನ್ ಮಾಡಿ ಹೇಳಿದ್ದಾರೆ. ನಾವು ಪೊಲೀಸ್ ಠಾಣೆ ತೆರಳಿದಾಗ, ಕಟ್ಟಡದ ಮಾಲಕ ಕಂಪನಿ ಪರವಾಗಿ ಬಂದಿದ್ದಾರೆ.

ಅಲ್ಲಿ ಅಕ್ರಮ ಆಗುತ್ತಿದ್ದರೆ, ಯುವಜನರಿಗೆ ಮೋಸ ಆಗುತ್ತಿರಬೇಕಾದರೆ 40 ಸಾವಿರ ಬಾಡಿಗೆ ಬರುತ್ತದೆ ಎಂದು ನಕಲಿ ಕಂಪನಿ ಪರ ವಕಾಲತ್ತು ಮಾಡುವುದಾ.. ಟ್ರೇಡ್ ಲೈಸನ್ಸ್ ಇದೆಯೆಂದು ಹೇಳಿ ಯಾಮಾರಿಸುತ್ತಾರೆ. ಚೈನ್ ಲಿಂಕ್ ಕಂಪನಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿದ್ಯಾರ್ಥಿ ಸಂಘಟನೆಗಳು, ಎನ್ಎಸ್ ಯುಐ ನಾವೆಲ್ಲ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದರು.

ಎನ್ಎಸ್ ಯುಐ ವಿದ್ಯಾರ್ಥಿ ಸಂಘಟನೆಯ ಕ್ರಿಸ್ಟನ್ ಮಿನೇಜಸ್, ಮಂಗಳೂರಿನಲ್ಲಿ ಪದೇ ಪದೇ ನಕಲಿ ಕಂಪನಿಗಳು ಬೆಳಕಿಗೆ ಬರುತ್ತಿದ್ದು, ಪೊಲೀಸರು, ಅಧಿಕಾರಿ ವರ್ಗಕ್ಕೆ ಯಾಕೆ ತಿಳಿಯುತ್ತಿಲ್ಲ. ಎರಡು ವರ್ಷದಿಂದ ಇಂತಹ ಮೋಸ ಆಗುತ್ತಿರಬೇಕಾದರೆ ಸ್ಥಳೀಯ ಪೊಲೀಸರಿಗೆ ತಿಳಿಯುತ್ತಿಲ್ಲವೇ. ಕೂಡಲೇ ಈ ಕಂಪನಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿ ಪ್ರೀತೇಶ್ ಕನೆಮರಡ್ಕ, ಸಿಂಧು ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!