February 27, 2026

9 ರೂಪಾಯಿ 34 ಪೈಸೆ ಸಾಲ ಕಟ್ಟಿ ಎಂದ ಬ್ಯಾಂಕ್: 10 ರೂಪಾಯಿ ಕೊಟ್ಟು ಚಿಲ್ಲರೆ 66 ಪೈಸೆ ವಾಪಸ್ ಕೊಡಿ ಎಂದ ರೈತ

0
image_editor_output_image-1934044676-1772149874963.jpg

ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್ ಗೆ ಗ್ರಾಹಕನೊಬ್ಬ ಮೈ ಚಳಿ ಬಿಡಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ರೈತ ಚೊಕ್ಕಣ್ಣ ಗೌಡ ಎಂಬಾತನೇ ಸಕಲೇಶಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಹಚಾರ ಬಿಡಿಸಿರುವ ಗ್ರಾಹಕನಾಗಿದ್ದಾನೆ. ಚೊಕ್ಕಣ್ಣ ಗೌಡ ಅವರು ಸುಮಾರು 15- 20 ವರ್ಷಗಳಿಂದ ಕೆನರಾ ಬ್ಯಾಂಕ್ ನ ಗ್ರಾಹಕನಾಗಿದ್ದು ಬೆಳೆ ಸಾಲಗಳಂತಹ ವ್ಯವಹಾರ ಮಾಡಿಕೊಂಡು ಬರುತ್ತಿದ್ದರು.

ವರ್ಷಗಳ ಹಿಂದೆ ಕೆನರಾ ಬ್ಯಾಂಕ್‌‌ನಿಂದ 50 ಸಾವಿರ ಲೋನ್ ಪಡೆದು ಸಂಪೂರ್ಣ ಹಣ ಬಡ್ಡಿ ಸಮೇತ ಕಟ್ಟಿದ್ದರು. ನಿನ್ನೆ ಏಕಾಏಕಿ ಕರೆ ಮಾಡಿ 9 ರೂಪಾಯಿ 34 ಪೈಸೆ ಸಾಲ ಕ್ಲಿಯರ್ ಮಾಡಲು ಬ್ಯಾಂಕ್ ಸಿಬ್ಬಂದಿ ಸೂಚಿಸಿದ್ದರು.

ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಗೆ ಬಂದು 10 ರೂಪಾಯಿ ಹಣ ಕೊಟ್ಟು ಸಾಲ ಕ್ಲಿಯರ್ ಮಾಡಿದ ಬೆಳೆಗಾರ ರೆಸಿಪ್ಟ್‌ನಲ್ಲಿ 9 ರೂಪಾಯಿ 34 ಪೈಸೆ ಉಲ್ಲೇಖಿಸಿದ್ದೀರಿ, ಉಳಿದ 66 ಪೈಸೆ ವಾಪಸ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಈ ಕುರಿತು ರೈತ ಚೊಕ್ಕಣ್ಣ ಮಾಧ್ಯಮಗಳ ಮೂಲಕ ಆಕ್ರೋಶ ಹೊರಹಾಕಿದ್ದು ರಸಿದಿಯಲ್ಲಿ 9 ರೂ 34 ಪೈಸೆ ಉಲ್ಲೇಖಿಸಿ 66 ಪೈಸೆ ವಾಪಸ್? ಕೊಟ್ಟಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸಾವಿರಾರು ಕೋಟಿ ಸಾಲ ಮಾಡಿ ಊರು ಬಿಟ್ಟವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಸಾಲ ಮಾಡಿ ವಾಪಸ್ ಕಟ್ಟುವ ಬಡ ರೈತರಿಗೆ ತೊಂದರೆ ಕೊಡುತ್ತಾರೆ ಎಂದು ಅಸಮಾಧನ ಹೊರಹಾಕಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಪ್ರಶ್ನಿಸಿದರೆ, ‘ಸಾಲ ವಾಪಸ್ ಕೇಳಿ ನಾವು ಕರೆ ಮಾಡಿಲ್ಲ. ಇದು ಕಂಪ್ಯೂಟರೈಸ್ಡ್ ಟೆಲಿಕಾಲ್‌ನಿಂದ ಆಗಿದೆ’ ಎಂದು ಸಬೂಬು ಹೇಳಿ ಕಳುಹಿಸಿದ್ದಾರೆ ಎಂದು ಬ್ಯಾಂಕ್ ನಡೆಗೆ ಬೆಳೆಗಾರ ಚೊಕ್ಕಣ್ಣಗೌಡ ಕಿಡಿಕಾರಿದ್ದು, ವಿಚಿತ್ರ ಸನ್ನಿವೇಶಕ್ಕೆ ಸಕಲೇಶಪುರ ಕೆನರಾ ಬ್ಯಾಂಕ್ ಶಾಖೆ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *

error: Content is protected !!