June 11, 2026

ಮಗುವಿನ ಸೆರೆಲಾಕ್ ಪ್ಯಾಕೆಟ್‌ಗಳಲ್ಲಿ ಎಂಡಿಎಂಎ ಅಡಗಿಸಿ ಮಾರಾಟ: 1 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಹಿತ ಪೆಡ್ಲೆರ್ ನ ಅರೆಸ್ಟ್

0
image_editor_output_image-1930350592-1772149296834.jpg

ಆನೇಕಲ್: ಅಂತಾರಾಜ್ಯ ಮಾದಕವಸ್ತು ಜಾಲದ ವಿರುದ್ಧ ಕೇರಳ ಪೊಲೀಸರು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಸ್ಸಾಂ ಮೂಲದ ಪೆಡ್ಲರ್ ಧೀರೇಶ್ ಕುಟುಮ್ (27) ಎಂಬಾತನನ್ನು ಬಂಧಿಸಿದ್ದಾರೆ.

ಕೇರಳದ ಮಾದಕವಸ್ತು ನಿಗ್ರಹ ದಳದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತನಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಧೀರೇಶ್‌ನ ತಂಗಿಯ ಪತಿ ನೈಜೀರಿಯಾ ಮೂಲದವನಾಗಿದ್ದು, ಆತನ ಮೂಲಕ ಅಸ್ಸಾಂಗೆ ಎಂಡಿಎಂಎ ರವಾನೆಯಾಗುತ್ತಿತ್ತು.

ಬಳಿಕ ಅಸ್ಸಾಂನಲ್ಲಿದ್ದ ತಂಗಿ ಮೂಲಕ ಕೇರಳ ಮತ್ತು ಕರ್ನಾಟಕಕ್ಕೆ ಮಾದಕ ವಸ್ತು ಸಾಗಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಸೆರೆಲಾಕ್ ಪ್ಯಾಕೆಟ್‌ಗಳಲ್ಲಿ ಎಂಡಿಎಂಎ ಅಡಗಿಸಿ ಮಾರಾಟ ಮಾಡಲಾಗುತ್ತಿತ್ತು. ಆನ್‌ಲೈನ್ ಆಹಾರ ವಿತರಕರಂತೆ ಕಾಣಿಸಿಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದ ಕೇರಳ ಪೊಲೀಸರು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದಲ್ಲಿರುವ ರಮೇಶ್ ರೆಡ್ಡಿ ಬಡಾವಣೆಯ ನಿವಾಸದ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ 15ಕ್ಕೂ ಹೆಚ್ಚು ಖಾಲಿ ಸೆರೆಲಾಕ್ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇದಕ್ಕೂ ವಾರದ ಹಿಂದೆ ಕೇರಳದ ಮಲಪುರಂನಲ್ಲಿ 1 ಕೆಜಿ ಎಂಡಿಎಂಎ ಸಹಿತ ಧೀರೇಶ್‌ನ ಸಹಚರರು ಸಿಕ್ಕಿಬಿದ್ದಿದ್ದರು. ಆ ವೇಳೆ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಯಲ್ಲೇ ಕಿಂಗ್‌ಪಿನ್ ಧೀರೇಶ್ ಕುಟುಮ್ ಕುರಿತು ಮಾಹಿತಿ ಲಭಿಸಿದ್ದು, ಅದರಂತೆ ಇದೀಗ ಆತನನ್ನು ಬಂಧಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ 750 ಗ್ರಾಂ ಮೆಥಾಂಫೆಟಮೈನ್, 450 ಎಂಡಿಎಂಎ ಮಾತ್ರೆಗಳು ಹಾಗೂ 550 ಗ್ರಾಂ ಕ್ರಿಸ್ಟಲ್ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಪ್ರಕರಣದಲ್ಲಿ ಮೂವರು ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಅಂತಾರಾಜ್ಯ ಮಟ್ಟದಲ್ಲಿ ವ್ಯಾಪಿಸಿರುವ ಮಾದಕವಸ್ತು ಜಾಲವನ್ನು ಬೇರುಸಮೇತ ಕಿತ್ತುಹಾಕಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!