ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣ: ಆರೋಪಿ, ಶಾಸಕ ಬೈರತಿ ಬಸವರಾಜುಗೆ ನ್ಯಾಯಾಂಗ ಬಂಧನ
ಬೆಂಗಳೂರು: ರೌಡಿ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಐದನೇ ಆರೋಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ನಗರದ ನ್ಯಾಯಾಲಯವು ಇದೇ ಫೆಬ್ರವರಿ ೨೬ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶಾಸಕ ಬಸವರಾಜ್ ಅವರನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇಂದು ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದು, ನ್ಯಾಯಾಧೀಶರು ಫೆಬ್ರವರಿ ೨೬ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.
ಬೈರತಿ ಬಸವರಾಜು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು, ’ಆರೋಪಿ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ. ಪ್ರಕರಣದ ಆಳವಾದ ವಿಚಾರಣೆ ನಡೆಸಲು ಇನ್ನೂ ಕಾಲಾವಕಾಶದ ಅಗತ್ಯವಿದೆ, ಆದ್ದರಿಂದ ಹೆಚ್ಚಿನ ದಿನಗಳ ಕಾಲ ಕಸ್ಟಡಿಗೆ ನೀಡಬೇಕು’ ಎಂದು ಮನವಿ ಮಾಡಿದರು.
ಆದರೆ, ಇದಕ್ಕೆ ಬೈರತಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ೯ ದಿನಗಳ ಕಾಲ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ, ಶಾಸಕರ ಆರೋಗ್ಯ ಹದಗೆಟ್ಟಿರುವುದರಿಂದ ಇನ್ನು ಮುಂದೆ ಕಸ್ಟಡಿಗೆ ನೀಡುವುದು ಸರಿಯಲ್ಲ ಎಂದು ವಾದಿಸಿದರು.
ವಿಚಾರಣೆ ವೇಳೆ ಶಾಸಕರ ಆರೋಗ್ಯದ ಬಗ್ಗೆ ನ್ಯಾಯಾಧೀಶರು ಮಾಹಿತಿ ಕೇಳಿದರು. ಭೈರತಿ ಬಸವರಾಜು ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಕಾರಣ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸಿಐಡಿ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು.
ಈ ವೇಳೆ ಬೈರತಿ ಪರ ವಕೀಲರು, ’ಜೈಲಿನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ತಜ್ಞ ವೈದ್ಯರಿಲ್ಲ. ಜನರಲ್ ಫಿಸಿಶಿಯನ್ ಹೃದಯದ ಸಮಸ್ಯೆಯನ್ನು ಹೇಗೆ ನಿಭಾಯಿಸಲು ಸಾಧ್ಯ?’ ಎಂದು ಪ್ರಶ್ನಿಸಿ ಆಸ್ಪತ್ರೆಯಲ್ಲಿಯೇ ಮುಂದುವರಿಸುವಂತೆ ಕೇಳಿಕೊಂಡರು.




